ನ. 21: ಗ್ರಾಪಂ ನೌಕರರ ಸಂಘದಿಂದ ‘ಬೆಳಗಾವಿ ಚಲೋ’
ಉಡುಪಿ, ನ.15: ಕರ್ನಾಟಕ ಗ್ರಾಪಂ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಗ್ರಾಪಂನಲ್ಲಿ ಈಗಾಗಲೇ ಕಾರ್ಯನಿರ್ವಹಿಸು ತ್ತಿರುವ ಸಿಬ್ಬಂದಿಗಳ, ಡಾಟಾ ಎಂಟ್ರಿ ಆಪರೇಟರುಗಳ ಕೆಲಸದ ರಕ್ಷಣೆಗಾಗಿ ನ.21ರಂದು ಮಂಗಳವಾರ ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಬೀಜಾಡಿ ತಿಳಿಸಿದ್ದಾರೆ.
ಗ್ರಾಪಂಗಳು ಇ-ಗವರ್ನೆನ್ಸ್‌ಗೆ ಒಳಪಡುವುದರಿಂದ ಗ್ರಾಪಂಗಳಲ್ಲಿ ನಿರ್ವಹಿಸ ಲಾಗುವ ಎಲ್ಲಾ ಇ-ಆಡಳಿತದ ಕೆಲಸಗಳಿಗೆ ಹೆಚ್ಚುವರಿ ಡಾಟಾ ಎಂಟ್ರಿ ಅಪರೇಟರ್ ಹುದ್ದೆಯನ್ನು ಒದಗಿಸಲು ನಿರ್ಧರಿಸಿದ ಸರಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ನೇಮಕಾತಿಗೆ ಅರ್ಜಿ ನಮೂನೆ ಮತ್ತು ಆಯ್ಕೆಗಾಗಿ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಇದರಿಂದ ಈಗ ಕರ್ತವ್ಯದಲ್ಲಿರುವರಿಗೆ ಆತಂಕದ ಸಂಗತಿ ಎದುರಾಗಿದೆ.
ಅಲ್ಲದೇ ಗ್ರಾಪಂಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಲವು ನೌಕರರಿಗೆ ಇನ್ನೂ ಅನುಮೋದನೆ ದೊರಕದೇ ಅವರೂ ಅತಂತ್ರರಾಗಿದ್ದಾರೆ. ಸೇವಾ ಖಾಯಮಾತಿ ಸಹಿತ ಹತ್ತು ಹಲವು ಬೇಡಿಕೆಗಳು ಇನ್ನೂ ಜಾರಿಯಾಗಿಲ್ಲ. ಪಿಎಫ್, ಇಎಸ್‌ಐ ಸೌಲಭ್ಯಗಳೂ ನೌಕರರಿಗೆ ದೊರಕುತ್ತಿಲ್ಲ. ಡಾಟಾ ಎಂಟ್ರಿ ಹುದ್ದೆಗಳಲ್ಲಿ ಈಗಾಗಲೇ ಕರ್ತವ್ಯದಲ್ಲಿ ಇರುವವರೂ ನೇರ ನೇಮಕಾತಿಯಿಂದ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇವೆ ಎಂದು ನಾರಾಯಣ ಬೀಜಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದುದರಿಂದ ಈಗಾಗಲೇ ಡಾಟಾ ಎಂಟ್ರಿ ಅಪರೇಟರ್‌ಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಮುಂದುವರೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವರನ್ನು ಒತ್ತಾಯಿಸಲಾಗುವುದು. ಈಗಾಗಲೇ ಸಚಿವರು, ಅಧಿಕಾರಿಗಳು ಈಗ ಹುದ್ದೆಯಲ್ಲಿರುವವರಿಗೆ ರಕ್ಷಣೆಯ ಭರವಸೆ ನೀಡಿದ್ದರೂ, ಅದನ್ನು ಈವರೆಗೆ ಈಡೇರಿಸಿಲ್ಲ. ಅಲ್ಲದೇ ಕಳೆದ ನ.3ರಂದು ಮುಖ್ಯಮಂತ್ರಿಗಳ ಜೊತೆಗೆ ಸಂಘದ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದ್ದ ವೇಳೆಯೂ ನೌಕರರ ಇತರ ಬೇಡಿಕೆಗಳನ್ನು ನೀಡಿ ಪರಿಹರಿಸಲು ಕೇಳಿದ್ದರೂ, ಅದರ ಬಗ್ಗೆ ಈವರೆಗೆ ಯಾವುದೇ ಸ್ಪಂದನೆ ಬಂದಿಲ್ಲ. ಆದುದರಿಂದ ಡಾಟಾ ಎಂಟ್ರಿ ಅಪರೇಟರ್‌ಗಳನ್ನು ಹುದ್ದೆಯಲ್ಲಿ ಮುಂದುವರಿಸುವಂತೆ ಹಾಗೂ ನೌಕರರ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ. 21ರಂದು ‘ಬೆಳಗಾವಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡು ವಿಧಾನಸಭಾ ಅಧಿವೇಶನದ ಸ್ಥಳದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ನಾರಾಯಣ ಬೀಜಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.