ಬಿಎಂಡಬ್ಲು ಕಾರಿನ ಆಸೆ ತೋರಿಸಿ ವಂಚನೆ
ಮಂಗಳೂರು, ನ.15: ಬಿಎಂಡಬ್ಲು ಕಂಪೆನಿಯ 4 ಕೋ.ರೂ. ಮೌಲ್ಯದ ಕಾರು ಲಾಟರಿಯಲ್ಲಿ ನಿಮಗೆ ಬಂದಿದೆ ಎಂದು ಇಮೇಲ್ ಸಂದೇಶ ಕಳುಹಿಸಿ ಸುಮಾರು 1,43,500 ರೂ. ವನ್ನು ಪಡೆದು ವಂಚಿಸಿದ ಐವರ ವಿರುದ್ಧ ಪ್ರಜ್ವಲ್ ಕುಮಾರ್ ಜೈನ್ ಎಂಬವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ನಗರದ ಕೋಡಿಯಾಲ್‌ಬೈಲ್ ನಲ್ಲಿ ಪ್ರಜ್ವಲ್ ಕುಮಾರ್ ಇದ್ದಾಗ ಅ. 31ರಂದು ಇಮೇಲ್ ಮಾಡಿದ ಆರೋಪಿಯು ನಿಮಗೆ 4 ಕೋ.ರೂ.ಮೌಲ್ಯದ ಕಾರು ಲಾಟರಿಯಲ್ಲಿ ಬಂದಿದೆ. ಅದನ್ನು ಪಡೆಯಲು 24,500 ರೂ. ಪಾವತಿಸಿ ಎಂದು ಸಂದೇಶ ಕಳುಹಿಸಿದ. ಅದನ್ನು ನಂಬಿದ ಪ್ರಜ್ವಲ್ ಕುಮಾರ್ ಆರಂಭಿಕ ಕಂತಿನಲ್ಲಿ 15 ಸಾವಿರ ರೂ. ಪಾವತಿಸಿದರು. ಬಳಿಕ ಮೊದಲ ಆರೋಪಿ ಫ್ರಾಂಕ್ ಡಾಗ್ಲಸ್ ಎಂ.ಆರ್.ನ ಸೂಚನೆಯಂತೆ ಇತರ ನಾಲ್ಕು ಮಂದಿಯ ಹೆಸರಿನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣವನ್ನು ಪಾವತಿಸಿದ್ದಾರೆ. ಒಟ್ಟು 1,43,500 ರೂ. ಪಾವತಿಸಿದ ಬಳಿಕ ತಾನು ಮೋಸ ಹೋಗಿರುವುದನ್ನು ಖಾತರಿಪಡಿಸಿ ಬಳಿಕ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಫ್ರಾಂಕ್ ಡಾಗ್ಲಸ್ ಎಂ.ಆರ್., ಲಾಲ್‌ರ ವೌಟ್, ಸಂದೀಪ್ ಕುಮಾರ್, ನೇಹಾ ಕುಮಾರಿ, ಸುರೇಂದರ್ ಸಿನ್ಹಾ ಎಂದು ಹೆಸರಿಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.