ಮಣಿಪಾಲ ವಿವಿಗೆ ನಕಲಿ ಪ್ರವೇಶಪತ್ರ: ಒಮನ್ ವಿದ್ಯಾರ್ಥಿ ಮರಳಿ ಸ್ವದೇಶಕ್ಕೆ
ಉಡುಪಿ, ನ.15: ವಿದ್ಯಾರ್ಥಿ ವೀಸಾದೊಂದಿಗೆ ಮಣಿಪಾಲ ವಿವಿಯಲ್ಲಿ ಇಂದು ಬಿ.ಕಾಂ. ಪ್ರವೇಶಕ್ಕಾಗಿ ಬಂದ ಮುರ್ಹಾದ್ ನದೀಮ್ ಸೆಡ್ ಅಲ್ ರವಾಯ್ಹಿ (21) ಸಲ್ಲಿಸಿದ ಪ್ರವೇಶ ಪತ್ರ ನಕಲಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆತನ ವಿದ್ಯಾರ್ಥಿ ವೀಸಾವನ್ನು ರದ್ದುಪಡಿಸಿದ ಜಿಲ್ಲಾ ಪೊಲೀಸರು ವಿದ್ಯಾರ್ಥಿ ದೇಶ ತೊರೆಯಲು ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ.
ವಿದ್ಯಾರ್ಥಿಯು ಇಂದು ಬಿ.ಕಾಂ. ಪ್ರವೇಶಕ್ಕಾಗಿ ತಂದ ಪ್ರವೇಶ ಪತ್ರ ನಕಲಿ ಎಂದು ತನಿಖೆಯ ವೇಳೆ ಗೊತ್ತಾಗಿದೆ. ಆತ ಪ್ರವೇಶ ಶುಲ್ಕ 6,600 ಅಮೆರಿಕನ್ ಡಾಲರ್‌ನ್ನು ಪಾವತಿಸಿದ್ದ. ವಿವಿಯ ಶಿಫಾರಸ್ಸಿನ ಮೇರೆಗೆ ಆತನಿಗೆ ನೀಡಿದ ವಿದ್ಯಾರ್ಥಿ ವೀಸಾವನ್ನು ರದ್ದು ಪಡಿಸಲಾಗಿದೆ. ವೀಸಾದ ಅವಧಿ 2018ರ ಸೆಪ್ಟೆಂಬರ್ ತಿಂಗಳವರೆಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಮುರ್ಹಾದ್‌ಗೆ ದೇಶವನ್ನು ತೊರೆಯಲು ಮೂರು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ವಿದ್ಯಾರ್ಥಿ ಒಮನ್ ದೇಶದಲ್ಲೇ ವಂಚನೆಗೊಳಗಾಗಿಬೇಕೆಂದು ಶಂಕಿಸಲಾಗಿದ್ದು, ಸ್ವದೇಶಕ್ಕೆ ಮರಳಿದ ಬಳಿಕ ಅಲ್ಲಿ ಅಧಿಕಾರಿಗಳಿಗೆ ಸಂಬಂಧಿತ ಏಜೆಂಟ್‌ಗಳ ವಿರುದ್ಧ ದೂರು ಸಲ್ಲಿಸುವುದಾಗಿ ಆತ ತಿಳಿಸಿದ್ದಾನೆ ಎಂದು ಡಾ.ಪಾಟೀಲ್ ಹೇಳಿದರು.
ಆತನಿಗೆ ನಕಲಿ ಪ್ರವೇಶ ಪತ್ರವನ್ನು ನೀಡಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಆತ ಸ್ವದೇಶಕ್ಕೆ ತೆರಳಿ ದೂರು ಸಲ್ಲಿಸಿದ ಬಳಿಕ ತನಿಖೆಯ ವೇಳೆ ಇದು ಗೊತ್ತಾಗಲಿದೆ. ಅಲ್ಲಿ ನಡೆಯುವ ತನಿಖೆಗೆ ನಮ್ಮಿಂದ ಯಾವುದೇ ನೆರವು ಯಾಚಿಸಿದರೆ ನೀಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.