'ಅಪಾರ ಆಸ್ತಿ ತನಿಖೆಯಿಂದ ಬಚಾವಾಗಲು ಅಯೋಧ್ಯೆ ವಿವಾದದಲ್ಲಿ ರವಿ ಶಂಕರ್ ಮಧ್ಯಸ್ಥಿಕೆ'
ಹೊಸದಿಲ್ಲಿ, ನ.16: ತನ್ನ ಅಪಾರವಾದ ಆಸ್ತಿ ತನಿಖೆಯಿಂದ ಬಚಾವಾಗುವ ಉದ್ದೇಶದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಅಯೋಧ್ಯೆ ವಿವಾದ ಬಿಕ್ಕಟ್ಟಿಗೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ ಎಂದು ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ಗುರುವಾರ ಆರೋಪಿಸಿದ್ದಾರೆ.
ರವಿಶಂಕರ್ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲೇ ವೇದಾಂತಿ ಈ ಹೇಳಿಕೆ ನೀಡಿದ್ದಾರೆ.
‘‘ಅಯೋಧ್ಯೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಶ್ರೀಶ್ರೀ ರವಿಶಂಕರ್ ಯಾರು? ಅವರು ಎನ್‌ಜಿಒ ಮುಂದುವರಿಸಿ ವಿದೇಶಿ ನಿಧಿಯನ್ನು ಸಂಗ್ರಹಿಸಲಿ. ಅವರು ಅಪಾರ ಆಸ್ತಿ-ಪಾಸ್ತಿ ಗಳಿಸಿದ್ದಾರೆಂಬ ಮಾಹಿತಿ ನನಗಿದ್ದು, ತನಿಖೆಯಿಂದ ಬಚಾವಾಗಲು ರಾಮಮಂದಿರ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ’’ ಎಂದು ಎಎನ್‌ಐ ಸುದ್ದಿಸಂಸ್ಥೆಗೆ ವೇದಾಂತಿ ತಿಳಿಸಿದ್ದಾರೆ.
ವೇದಾಂತಿ ರಾಮಮಂದಿರ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ರವಿಶಂಕರ್ ಮಧ್ಯಸ್ಥಿಕೆ ವಹಿಸುವುದನ್ನು ಈ ಹಿಂದೆಯೂ ಆಕ್ಷೇಪಿಸಿದ್ದರು.
ರವಿಶಂಕರ್ ಅಯೋಧ್ಯೆ ವಿಷಯದಲಿ ಮಧ್ಯಸ್ಥಿಕೆ ವಹಿಸುವುದನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ವಿಶ್ವ ಹಿಂದೂ ಪರಿಷತ್ ಕೂಡ ವಿರೋಧ ವ್ಯಕ್ತಪಡಿಸಿವೆ.
‘‘ನಾನು ಒಗ್ಗಟ್ಟು ಹಾಗೂ ಅನ್ಯೋನ್ಯತೆಯನ್ನು ಬಯಸುವೆ..ಇದೊಂದು ಆರಂಭ ಮಾತ್ರ. ನಾವು ಎಲ್ಲರೊಂದಿಗೆ ಮಾತನಾಡುತ್ತೇವೆ’’ ಎಂದು ಬುಧವಾರ ರವಿಶಂಕರ್ ಹೇಳಿದ್ದಾರೆ.
ಶ್ರೀಶ್ರೀ ರವಿಶಂಕರ್ ಬುಧವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿಯಾಗಿದ್ದರು. ಅಯೋಧ್ಯೆ ವಿವಾದವನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವುದಕ್ಕೆ ಯೋಗಿ ಒಲವು ವ್ಯಕ್ತಪಡಿಸಿದ್ದರು.