ಛತ್ತೀಸ್ ಗಢ ಸಿಎಂ ಸೊಸೆಯ ಹೆರಿಗೆಗೆ ಒಂದು ಮಹಡಿಯನ್ನೇ ಮೀಸಲಿಟ್ಟ ಆಸ್ಪತ್ರೆ !
ರಾಯಪುರ್, ನ. 16: ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಸೊಸೆ ಐಶ್ವರ್ಯಾ ರೈ ಅವರು ಹೆರಿಗೆಗಾಗಿ ದಾಖಲಾಗಿದ್ದಾರೆಂಬ ನೆಪದಲ್ಲಿ ಇಲ್ಲಿನ ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯ ಒಂದು ಇಡೀ ಮಹಡಿಯನ್ನೇ ಅವರಿಗಾಗಿ ಮೀಸಲಿರಿಸಿ ಇತರ ರೋಗಿಗಳಿಗೆ ಅನಾನುಕೂಲ ಸೃಷ್ಟಿಸಿದ ಘಟನೆ ವರದಿಯಾಗಿದೆ.
ಮುಖ್ಯಮಂತ್ರಿಯ ಕುಟುಂಬಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಎರಡನೇ ಮಹಡಿಯಲ್ಲಿದ್ದ 1,200 ರೋಗಿಗಳನ್ನು ಇನ್ನೊಂದು ಮಹಡಿಗೆ ಸ್ಥಳಾಂತರಿಸಿದ ಪರಿಣಾಮ ಅಲ್ಲಿ ರೋಗಿಗಳಿಗೆ ಮಲಗಲೂ ಸ್ಥಳವಿಲ್ಲದಂತಾಗಿ ಇಬ್ಬರು ರೋಗಿಗಳು ಒಂದೇ ಬೆಡ್ ಮೇಲೆ ಮಲಗುವ ಪ್ರಮೇಯವೂ ಒದಗಿ ಬಂದಿದೆ.
ಎರಡನೇ ಮಹಡಿಯಲ್ಲಿ ಒಟ್ಟು 700 ರೋಗಿಗಳಿಗೆ ಸ್ಥಳಾವಕಾಶವಿದ್ದರೂ ಎಲ್ಲರನ್ನೂ ಸ್ಥಳಾಂತರಿಸಿ ಮುಖ್ಯಮಂತ್ರಿಯ ಸೊಸೆಗೆ ಒಂದು ಕೊಠಡಿ ನೀಡಲಾಯಿತಾದರೆ, ಸುರಕ್ಷತಾ ಕರ್ತವ್ಯಕ್ಕೆ ನೇಮಿಸಲ್ಪಟ್ಟಿದ್ದ ಸುಮಾರು 50 ಪೊಲೀಸ್ ಸಿಬ್ಬಂದಿಗಳಗೆ ಮೂರು ಕೊಠಡಿಗಳನ್ನು ನೀಡಲಾಯಿತು.
ಈ ಹೊಸ ವ್ಯವಸ್ಥೆಯಿಂದ ರೋಗಿಗಳು ಕಂಗಾಲಾಗಿ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ದೂರಿಕೊಂಡರೂ ಸ್ವಲ್ಪ ಹೊಂದಿಕೊಂಡು ಹೋಗುವಂತೆ ಅವರಿಗೆ ಸಲಹೆ ನೀಡಲಾಯಿತೆನ್ನಲಾಗಿದೆ.
ರೋಗಿಗಳಿಗೆ ಇಷ್ಟೊಂದು ಅನಾನುಕೂಲತೆ ಉಂಟಾಗಿರುವ ಹೊರತಾಗಿಯೂ ರಾಜ್ಯ ಬಿಜೆಪಿ ಘಟಕ ಮುಖ್ಯಮಂತ್ರಿಯನ್ನು ಹೊಗಳಿದೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಆಧುನಿಕ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಬದಲು ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದು ಆಸ್ಪತ್ರೆಗೆ ಗೌರವದ ಸಂಗತಿ ಎಂದು ಬಿಜೆಪಿ ಹೇಳಿಕೊಂಡಿದ್ದರೆ, ಮುಖ್ಯಮಂತ್ರಿಯ ಸೊಸೆಯನ್ನು ಆಸ್ಪತ್ರೆಯಲ್ಲಿ ವಿಐಪಿಯಂತೆ ನೋಡಿಕೊಳ್ಳಲಾಯಿತು ಎಂದು ಕಾಂಗ್ರೆಸ್ ವಕ್ತಾರ ವಿಕಾಸ್ ತಿವಾರಿ ಆರೋಪಿಸಿದ್ದಾರೆ.