×
Ad

ಇಬ್ರಾಹೀಂ ಗಂಗೊಳ್ಳಿಯಿಂದ ಉಚಿತ ಆ್ಯಂಬುಲೆನ್ಸ್‌ ಸೇವೆ

Update: 2017-11-16 15:40 IST

ಕುಂದಾಪುರ, ನ.16: ಖಾಸಗಿ ವೈದ್ಯರ ಮುಷ್ಕರದಿಂದ ಬಡ ರೋಗಿಗಳು ಆರೋಗ್ಯ ಸೇವೆಯಿಂದ ವಂಚಿತರಾಗಿ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಗಂಗೊಳ್ಳಿಯ ಸಮಾಜ ಸೇವಕ ಇಬ್ರಾಹಿಂ ಕುಂದಾಪುರ ಸರಕಾರಿ ಆಸ್ಪತ್ರೆಯ ಮುಂದೆ ತನ್ನ ಎರಡು ಆ್ಯಂಬುಲೆನ್ಸ್‌ಗಳಲ್ಲಿ ಉಚಿತ ಸೇವೆ ಗಳನ್ನು ನೀಡುತ್ತಿದ್ದಾರೆ.

ಇಬ್ರಾಹೀಂ ಗಂಗೊಳ್ಳಿ ತನ್ನ ‘ಆಪತ್ಬಾಂಧವ’ ಮತ್ತು ‘ಜೀವರಕ್ಷ’ ಎಂಬ ಎರಡು ಆ್ಯಂಬುಲೆನ್ಸ್‌ಗಳನ್ನು ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಉಚಿತ ಸೇವೆಗಾಗಿ ನಿಲ್ಲಿಸಿದ್ದು, ಅದರ ಮೂಲಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆ ಅಥವಾ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗುವ ಮೂಲಕ  ಇಬ್ರಾಹೀಂ ಹಾಗೂ ಅವರ ತಂಡ ಮಾನವೀಯತೆ ಮೆರೆಯುತ್ತಿದ್ದಾರೆ. ಇವರ ಸೇವೆಯಲ್ಲಿ ಗಂಗೊಳ್ಳಿಯ ಅದಿಲ್, ಅಕ್ಷಯ್ ಖಾರ್ವಿ ಕೈಜೋಡಿಸಿದ್ದಾರೆ. ಒಟ್ಟು ಮೂರು ಬಾರಿ ನಡೆದ ಮುಷ್ಕರದ ಸಂದರ್ಭದಲ್ಲಿ ಅವರು ಒಟ್ಟು 14 ರೋಗಿಗಳನ್ನು ಉಡುಪಿಗೆ ಕರೆತಂದು ಅಗತ್ಯ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ.

‘ಇಂದು ಸೇರಿ ಮೂರನೆ ಬಾರಿಗೆ ಖಾಸಗಿ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ಮೊದಲ ದಿನ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಈ ಎರಡು ಆ್ಯಂಬುಲೆನ್ಸ್‌ಗಳನ್ನು ಉಚಿತ ಸೇವೆಗೆಂದು ನಿಲ್ಲಿಸಿ ಏಳು ಜನ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆ ಮತ್ತು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಸೋಮವಾರದ ಮುಷ್ಕರ ಸಂದರ್ಭ ಆರು ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ವರ್ಗಾಯಿಸಿದ್ದೇವೆ ಎಂದು ಇಬ್ರಾಹೀಂ ಗಂಗೊಳ್ಳಿ ತಿಳಿಸಿದರು.

ಇಂದು ಕೂಡ ಖಾಸಗಿ ವೈದ್ಯರು ಮುಷ್ಕರ ನಡೆಸಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಪಕ್ಷಪಾತಕ್ಕೆ ಒಳಗಾದ ವೃದ್ಧರೊಬ್ಬರನ್ನು ಅಜ್ಜರ ಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಇನ್ನು ರಾತ್ರಿ 12ಗಂಟೆಯವರೆಗೆ ಕುಂದಾಪುರದಲ್ಲಿ ಉಚಿತ ಸೇವೆಗಾಗಿ ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ. ಖಾಸಗಿ ವೈದ್ಯರ ಮುಷ್ಕರ ಮುಂದುವರೆದರೆ ನಮ್ಮ ಉಚಿತ ಆ್ಯಂಬುಲೆನ್ಸ್ ಸೇವೆ ಕೂಡ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News