×
Ad

ತುರ್ತು ಚಿಕಿತ್ಸಾ ಘಟಕಕ್ಕೆ ಹೆಚ್ಚುವರಿ ವೈದ್ಯರ ನೇಮಕ: ಜಿಲ್ಲಾ ಸರ್ಜನ್

Update: 2017-11-16 16:37 IST

ಉಡುಪಿ, ನ.16: ಖಾಸಗಿ ಆಸ್ಪತ್ರೆಯ ವೈದ್ಯರುಗಳ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಮಾಡಲಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಹೆಚ್ಚುವರಿ ವೈದ್ಯರು ಹಾಗೂ ನರ್ಸ್‌ಗಳನ್ನು ನಿಯೋಜಿಸಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆಯಿಂದ ನೋಂದಾಣಿ ಮಾಡಿಕೊಳ್ಳುವಲ್ಲಿ ರೋಗಿ ಗಳ ನೂಕುನುಗ್ಗಲು ಮತ್ತು ಸಾಕಷ್ಟು ಮಂದಿ ಸರತಿಯಲ್ಲಿ ನಿಂತಿರುವುದು ಕಂಡು ಬಂದಿದೆ. ತುರ್ತು ಚಿಕಿತ್ಸಾ ಘಟಕಕ್ಕೆ ಕುಂದಾಪುರ, ಉಡುಪಿಯ ವಿವಿಧ ಭಾಗ ಗಳಿಂದ ರೋಗಿಗಳು ಹಾಗೂ ಗಾಯಾಳುಗಳನ್ನು ಇಲ್ಲಿಗೆ ಕರೆತರಲಾಗುತ್ತಿದೆ. ಈ ನಿಟ್ಟಿನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಬೆಳಗ್ಗೆ ಇಬ್ಬರು ಹಾಗೂ ರಾತ್ರಿ ಇಬ್ಬರು ವೈದ್ಯರನ್ನು ಮತ್ತು ಹೆಚ್ಚುವರಿ ನರ್ಸ್ ಗಳನ್ನು ನೇಮಕ ಮಾಡಲಾಗಿದೆ ಎಂದರು.

‘ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಮತ್ತು ಒಳರೋಗಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿ ಬರುವ ರೋಗಿಗಳ ಸಂಖ್ಯೆ ನಿನ್ನೆ ರಾತ್ರಿಯಿಂದಲೇ ಜಾಸ್ತಿ ಆಗುತ್ತಿದೆ. ತುರ್ತು ಚಿಕಿತ್ಸಾ ಘಟಕಕ್ಕೆ ಹೆಚ್ಚು ರೋಗಿಗಳು ಬರುತ್ತಲೇ ಇದ್ದಾರೆ. ಉಡುಪಿ ಮಾತ್ರವಲ್ಲದೆ ಕುಂದಾಪುರ ಕಡೆಯಿಂದಲೂ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ನಾವು ಇದಕ್ಕೆ ಬೇಕಾದ ಪೂರ್ವ ತಯಾರಿಯನ್ನು ನಿನ್ನೆ ರಾತ್ರಿಯಿಂದ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದರು.

‘ಮುಷ್ಕರಕ್ಕೆ ಮೊದಲು ಪ್ರತಿದಿನ 500-600 ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರೆ, ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಕಳೆದ ಕೆಲವು ದಿನಗಳಿಂದ ರೋಗಿಗಳ ಸಂಖ್ಯೆ 900-1000ಕ್ಕೆ ಏರಿಕೆಯಾಗಿದೆ. ಇಂದು ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಬಂದ್ ಆಗಿರುವುದರಿಂದ ಇಲ್ಲಿನ ರೋಗಿಗಳ ಸಂಖ್ಯೆ 1000ಕ್ಕಿಂತ ಮೀರುವ ಸಾಧ್ಯತೆಗಳಿವೆ’ ಎಂದರು.

ಸದ್ಯ ಜಿಲ್ಲಾಸ್ಪತ್ರೆಯಲ್ಲಿ 27 ವೈದ್ಯರುಗಳಿದ್ದು, 33 ನರ್ಸ್‌ಗಳು ಸೇವೆ ಸಲ್ಲಿಸು ತ್ತಿದ್ದಾರೆ. ಅದೇ ರೀತಿ 100 ಸಿಬ್ಬಂದಿಗಳಿದ್ದಾರೆ. ನ.13ರಂದು ಎಲ್ಲರಿಗೂ ಸುತ್ತೋಲೆ ಕಳುಹಿಸಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ತುರ್ತು ಸಂದರ್ಭ ಬಿಟ್ಟರೆ ಸದ್ಯ ಯಾರಿಗೂ ರಜೆ ನೀಡುತ್ತಿಲ್ಲ. ರಜೆಯಲ್ಲಿ ಇದ್ದವರನ್ನು ಕರ್ತವ್ಯಕ್ಕೆ ಬರುವಂತೆ ಹೇಳಲಾಗಿದೆ. ಇಲ್ಲಿ ಯಾವುದೇ ಔಷಧಿಗಳ ಕೊರತೆ ಇಲ್ಲ. ಇಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ನಾವು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡುತ್ತಿದ್ದೇವೆ ಎಂದು ಅವರು ಹೇಳಿದರು.

ಕುಂದಾಪುರದಲ್ಲಿ ವೈದ್ಯರ ಕೊರತೆ
ಖಾಸಗಿ ವೈದ್ಯರ ಮುಷ್ಕರದ ಮಧ್ಯೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಯಿಂದ ತಾಲೂಕಿನ ರೋಗಿಗಳು ಸಂಕಷ್ಟ ಪಡುವಂತಾಗಿದೆ.
ಇಲ್ಲಿನ ಕೆಲವು ವಿಭಾಗಗಳಲ್ಲಿ ವೈದ್ಯರ ಕೊರತೆ ಮತ್ತು ಇನ್ನೂ ಒಂದೆರಡು ವಿಭಾಗದಲ್ಲಿ ವೈದ್ಯರು ಅನಿವಾರ್ಯ ಕಾರಣದಿಂದ ರಜೆಯಲ್ಲಿ ತೆರಳಿರುವುದ ರಿಂದ ಚಿಕಿತ್ಸೆಗೆ ಬಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ದೂರದ ಹಳ್ಳಿಗಳಿಂದ ಆಸ್ಪತ್ರೆ ಆಗಮಿಸಿದ ವೃದ್ಧರು ಹಾಗೂ ಬಡವರು ವೈದ್ಯರು ಸಿಗದೆ ಹಾಗೂ ಅಗತ್ಯ ಚಿಕಿತ್ಸೆ ದೊರೆಯದೆ ಊರಿಗೆ ಮರಳಿರುವುದು ಕಂಡುಬಂದವು.

ಕುಂದಾಪುರದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗವನ್ನು ಇಂದು ಬಂದ್ ಮಾಡಲಾಗಿದ್ದು, ಹೊರಗಡೆ ಒಪಿಡಿ ಸೇವೆ ಸ್ಥಗಿತಗೊಳಿಸಿರುವ ಬೋರ್ಡ್‌ಗಳನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಪರಿಣಾಮ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಲ್ಲಿ ಚಿಕಿತ್ಸೆ ಸಿಗದ ಹೆಚ್ಚಿನ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ.

ಏಳು ವೈದ್ಯರು ತರಬೇತಿಯಲ್ಲಿ: ಡಿಎಚ್‌ಒ
ಬೆಂಗಳೂರು ಹಾಗೂ ಉಡುಪಿಯಲ್ಲಿ ತರಬೇತಿಯಲ್ಲಿರುವ ಜಿಲ್ಲೆಯ ಒಟ್ಟು ಏಳು ಮಂದಿ ವೈದ್ಯರಿಗೆ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರ, ಆರು ಸಮುದಾಯ ಆರೋಗ್ಯ ಕೇಂದ್ರ, 2 ತಾಲೂಕು ಆಸ್ಪತ್ರೆಗಳು ಮತ್ತು ಒಂದು ಜಿಲ್ಲೆ ಆಸ್ಪತ್ರೆ ಯಲ್ಲಿ ಎರಡು ವಿಭಾಗಗಳಿದ್ದು, ಅವುಗಳಲ್ಲಿ ಒಟ್ಟು 102 ಗುತ್ತಿಗೆ ಆಧಾರಿತ ಮತ್ತು ಖಾಯಂ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಎನ್‌ಎಚ್‌ಎಂನಲ್ಲಿ ಆರು ಮಂದಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 18 ‘108’ ಸೇರಿ ದಂತೆ ಒಟ್ಟು 31 ಆ್ಯಂಬುಲೆನ್ಸ್‌ಗಳಿವೆ ಎಂದರು.

ನಾಲ್ಕು ಮಂದಿ ವೈದ್ಯರು ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದರೆ, ಮೂರು ಮಂದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ತರಬೇತಿ ಪಡೆಯು ತ್ತಿದ್ದಾರೆ. ಇವರೆಲ್ಲರನ್ನು   ಕರ್ತವ್ಯಕ್ಕೆ ಹಾಜಾಗುವಂತೆ ಈಗಾಗಲೇ ಸೂಚಿಸಲಾಗಿದೆ. ನಾಳೆಯಿಂದ ಯಾವುದೇ ತರಬೇತಿ ಕಾರ್ಯ ಕ್ರಮವನ್ನು ನಡೆದಂತೆಯೂ ತಿಳಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News