ತನ್ನದೇ ಚಿತೆ ನಿರ್ಮಿಸಿ, ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ 90ರ ವೃದ್ಧೆ
ಮುಂಬೈ, ನ.16: 90ರ ಹರೆಯದ ವೃದ್ಧೆಯೊಬ್ಬರು ತನ್ನದೇ ಚಿತೆಯನ್ನು ನಿರ್ಮಿಸಿ ಅದರ ಮೇಲೆ ಕುಳಿತು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಮಹಾರಾಷ್ಟ್ರದ ಕೋಲಾಪುರ ಜಿಲ್ಲೆಯಲ್ಲಿ ನಡೆದಿದೆ.
ನವೆಂಬರ್ 13ರಂದು ಬಮಲಿ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಕಲ್ಲವ್ವ ದಡು ಕಾಂಬ್ಳೆ ಎಂದು ಗುರುತಿಸಲಾಗಿದೆ.
ಕಲ್ಲವ್ವ ತನ್ನ ಮಗ ರಾಜ್ಯ ರಸ್ತೆ ಸಾರಿಗೆಯಲ್ಲಿ ಕಂಡಕ್ಟರ್ ಆಗಿರುವ 57ರ ಹರೆಯದ ವಿಠಲ್ ಎಂಬಾತನ ಪಕ್ಕದ ಮನೆಯಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದರು. ನವೆಂಬರ್ 13ರಂದು ಸಂಜೆ ಆಕೆಯ ಮೊಮ್ಮಗಳು ನೀಡಿದ ಆಹಾರವನ್ನು ತಿಂದು ತನ್ನ ಮನೆಗೆ ತೆರಳಿದ ಕಲ್ಲವ್ವ ಬಾಗಿಲು ಮುಚ್ಚಿ ಕಟ್ಟಿಗೆ ಮತ್ತು ಒಣಸೆಗಣಿಯಿಂದ ತನ್ನ ಚಿತೆಯನ್ನು ನಿರ್ಮಿಸಿದ್ದಾಳೆ. ನಂತರ ಅದರ ಮೇಲೆ ಕುಳಿತು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.
ಮರುದಿನ ಬೆಳಿಗ್ಗೆ ಆಕೆಯ ಮೊಮ್ಮಗಳು ಅಜ್ಜಿಗೆ ಕುಡಿಯಲು ಹಾಲು ತಂದಾಗ ಆಕೆ ಬಾಗಿಲು ತೆರೆಯದ ಕಾರಣ ತಂದೆಯಲ್ಲಿ ವಿಚಾರ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ಧಾವಿಸಿದ ವಿಠಲ್ ಬಾಗಿಲು ಮುರಿದು ಒಳಹೊಕ್ಕಾಗ ಭಸ್ಮವಾದ ಚಿತೆ ಮತ್ತು ಅರೆಸುಟ್ಟ ದೇಹ ಕಂಡುಬಂದಿದೆ.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಅಪಘಾತದಿಂದ ಸಂಭವಿಸಿದ ಸಾವು ಎಂದು ದೂರು ದಾಖಲಿಸಿದ್ದು ಅಜ್ಜಿಯು ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಮತ್ತು ಅದೇ ಕಾರಣಕ್ಕೆ ತನ್ನ ಬದುಕಿಗೆ ಅಂತ್ಯ ಹಾಡಿದ್ದಾರೆ ಎಂದು ತಿಳಿಸಿದ್ದಾರೆ.