ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ಪಡೆಯಲು ಯತ್ನಿಸಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ
ಹೊಸದಿಲ್ಲಿ, ನ.16: ಭಾರತವು ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಪಡೆಯಲು ಯತ್ನಿಸಿದರೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹನ್ಸ್‌ರಾಜ್ ಅಹಿರ್ ಹೇಳಿದ್ದು ಆ ಭಾಗವು ಯಾವತ್ತಿಗೂ ಕೂಡಾ ಭಾರತದ ಅಂಗವೇ ಆಗಿದೆ ಎಂದು ಒತ್ತಿ ಹೇಳಿದ್ದಾರೆ.
ಹಿಂದಿನ ಸರಕಾರದ ತಪ್ಪುಗಳ ಕಾರಣದಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಅಡಿಯಲ್ಲಿದೆ ಎಂದು ಗೃಹ ರಾಜ್ಯ ಸಚಿವರಾದ ಅಹಿರ್ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದೆ. ಹಿಂದಿನ ಸರಕಾರಗಳ ತಪ್ಪಿನಿಂದಾಗಿ ಅದು ಪಾಕಿಸ್ತಾನದ ಪಾಲಾಗಿದೆ. ನಾವದನ್ನು ಮರಳಿ ಪಡೆಯಲು ಯತ್ನಿಸಿದರೆ ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಯಾಕೆಂದರೆ ಅದು ನಮ್ಮ ಹಕ್ಕು ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಅಹಿರ್ ನುಡಿದರು. ಪಿಒಕೆಯನ್ನು ಪಾಕಿಸ್ತಾನದಿಂದ ಮರುಪಡೆಯಲು ಪ್ರಯತ್ನಿಸಲಾಗುವುದು ಎಂದವರು ತಿಳಿಸಿದರು.
ಕೆಲದಿನಗಳ ಹಿಂದೆ ನ್ಯಾಶನಲ್ ಕಾಂನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಒಕೆ ಪಾಕಿಸ್ತಾನದ ಭಾಗವಾಗಿದೆ. ಪಾಕಿಸ್ತಾನ ಎಂದಿಗೂ ಅದನ್ನು ಭಾರತದ ತೆಕ್ಕೆಗೆ ಸೇರಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಹಿರ್ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.