ಬಜ್ಪೆಯಲ್ಲಿ ಸುಸಜ್ಜಿತ ಮಾರುಕಟ್ಟೆಗೆ ಸಿಪಿಐ ಒತ್ತಾಯ
ಮಂಗಳೂರು, ನ.16: ಬಜ್ಪೆ ನಗರವು ವೇಗದಿಂದ ಬೆಳೆಯುತ್ತಿದ್ದು, ಪ್ರತೀ ಸೋಮವಾರ ಇಲ್ಲಿ ವಾರದ ಸಂತೆ ನಡೆಯುತ್ತಿದೆ. ಆದರೆ ಬಜ್ಪೆಯಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಕಟ್ಟಡ ಇಲ್ಲದಿರುವುದು ಕೊರತೆಯಾಗಿದೆ. ಆದುದರಿಂದ ಬಜ್ಪೆ ಗ್ರಾಪಂ ಇಲ್ಲಿ ಸುಸಜ್ಜಿತ ಮಾರುಕಟ್ಟೆಯನ್ನು ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಪಿಐ ಬಜಪೆ ನಗರ ಸಮ್ಮೇಳನ ಆಗ್ರಹಿಸಿದೆ.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾಳ ಸಂಶಯಾಸ್ದದ ಸಾವಿನ ಬಗ್ಗೆ ವಿಶೇಷ ಪೊಲೀಸ್ ತನಿಖಾಧಿಕಾರಿ ತನಿಖೆ ನಡೆಸುತ್ತಿದ್ದು ಇದುವರೆಗೆ ವರದಿ ನೀಡಿರುವುದಿಲ್ಲ. ತನಿಖೆಯನ್ನು ಕೂಡಲೇ ಮುಗಿಸಿ ವರದಿಯನ್ನು ಬಹಿರಂಗಪಡಿಸಿ ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಗೆ ಒಳಪಡಿಸಬೇಕೆಂದು ಸಿಪಿಐ ಆಗ್ರಹಿಸಿದೆ.
ಪಕ್ಷದ ಬಜಪೆ ಕಚೇರಿಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಕಾರ್ಯದರ್ಶಿ ವಿ. ಎಸ್. ಬೇರಿಂಜ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಭಾಗವಹಿಸಿದ್ದರು.
ಪಕ್ಷದ ನಾಯಕರಾದ ಸುಲೋಚನಾ ಕವತ್ತಾರು, ಸುಜಾತಾ ನಿಡ್ಡೋಡಿ, ಮೀರಾ ಶಾಂತಿಗುಡ್ಡೆ, ರೂಪಾವತಿ ಸಿದ್ದಾರ್ಥನಗರ, ರೇವತಿ ಎಳಿಂಜೆ ಉಪಸ್ಥಿತರಿದ್ದರು