×
Ad

​ಹದಿನೈದು ಮಂದಿ ಸಾಧಕರಿಗೆ 2017ರ ಆಳ್ವಾಸ್ ನುಡಿಸಿರಿ ಪುರಸ್ಕಾರ

Update: 2017-11-16 20:45 IST

ಮೂಡುಬಿದಿರೆ, ನ. 16: ಡಿ.3ರಂದು ಜರುಗಲಿರುವ ಆಳ್ವಾಸ್ ನುಡಿಸಿರಿ 2017ರ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿದ 15 ಮಂದಿ ಸಾಧಕರಿಗೆ ‘ಆಳ್ವಾಸ್ ನುಡಿಸಿರಿ 2017’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅತಿವಂದನೀಯ ಬಿಷಪ್ ಹೆನ್ರಿ ಡಿ’ಸೋಜ, ಎಚ್.ಎಸ್.ದೊರೆಸ್ವಾಮಿ, ನಾಡೋಜ ಎನ್. ಸಂತೋಷ್ ಹೆಗ್ಡೆ, ಪ್ರೊ.ತೇಜಸ್ವಿ ಕಟ್ಟೀಮನಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ವಿಜಯಾದಬ್ಬೆ, ಪ್ರೊ. ಕೆ.ಬಿ.ಸಿದ್ದಯ್ಯ, ಪ್ರೊ.ಜಿ.ಎಚ್. ಹನ್ನೆರಡುಮಠ, ಪ್ರೊ.ಬಿ.ಸುರೇಂದ್ರರಾವ್, ಡಾ. ಎಂ. ಪ್ರಭಾಕರ ಜೋಶಿ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಪದ್ಮರಾಜದಂಡಾವತಿ, ರತ್ನಮಾಲಾ ಪ್ರಕಾಶ್, ಡಾ.ತೋನ್ಸೆ ವಿಜಯ್‌ಕುಮಾರ್ ಶೆಟ್ಟಿ ಹಾಗೂ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.3ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವು ನಡೆಯಲಿದೆ. ಪ್ರಶಸ್ತಿಯು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಪದ್ಮನಾಭ ಶೆಣೈ, ಪ್ರಾಧ್ಯಾಪಕ ವೇಣುಗೋಪಾಲ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಪ್ರಶಸ್ತಿ ಪುರಸ್ಕೃತರು

ಅತಿವಂದನೀಯ ಬಿಷಪ್ ಹೆನ್ರಿ ಡಿ'ಸೋಜ


ಪ್ರಸ್ತುತ ಬಳ್ಳಾರಿ ಪಾಂತ್ರ್ಯದ ಧರ್ಮಾಧ್ಯಕ್ಷರಾಗಿರುವ ಪರಮಪೂಜ್ಯ ಬಿಷಪ್ ಹೆನ್ರಿ ಡಿ'ಸೋಜ ಅವರು ಕಲೆ-ಸಾಹಿತ್ಯ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಮಂಗಳೂರಿನಲ್ಲಿ ಲಲಿತಕಲೆಗಳ ಅಧ್ಯಯನಕ್ಕಾಗಿ ಸಂದೇಶ ಕಾಲೇಜನ್ನು ಸ್ಥಾಪಿಸಿದ ಕೀರ್ತಿಗೆ ಇವರು ಪಾತ್ರರು.

'ನಿಸರ್ಗ ವಿಜಯ', ನವೋದಯ' ಮೊದಲಾದ ಪರಿಸರ ಮತ್ತು ಜೀವನ ಮೌಲ್ಯ ಆಧಾರಿತ ದೃಶ್ಯ ನಾಟಕಗಳನ್ನು ನಿರ್ದೇಶಿಸಿ ಇವರು ರಂಗಕ್ಕೆ ತಂದಿದ್ದಾರೆ. ಮಕ್ಕಳ ಕಲಾಭಿರುಚಿಯನ್ನು ಬೆಳೆಸುವ ದೃಷ್ಟಿಯಿಂದ ಕಲೋತ್ಸವ, ಕರಾವಳಿ ಚಿತ್ರೋತ್ಸವ ಮೊದಲಾದ ಸಾಂಸ್ಕೃತಿಕ ಉತ್ಸವಗಳನ್ನು ಸಂಘಟಿಸಿದವರು. ಲಲಿತ ಕಲೆಗಳ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಕನ್ನಡ, ತುಳು, ಕೊಂಕಣಿ ಭಾಷೆಗಳ ಬೆಳವಣಿಗೆಗೆ ಹಲವು ವಿಚಾರ ಸಂಕಿರಣಗಳನ್ನು ಸಂಘಟಿಸಿದ ಇವರು' ಸಮಾಜ ಮತ್ತು ಸಾಹಿತ್ಯ' ಎಂಬ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಎಚ್.ಎಸ್. ದೊರೆಸ್ವಾಮಿ


ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿ ಪ್ರಸಿದ್ಧರಾದ ಎಚ್.ಎಸ್. ದೊರೆಸ್ವಾಮಿಯವರು ಶತಾಯುಷಿಗಳಾಗಿದ್ದರೂ ಸಕ್ರಿಯರು.

1918ರ ಏಪ್ರಿಲ್ 10 ರಂದು ಬೆಂಗಳೂರಿನ ಹಾರೋಹಳ್ಳಿಯಲ್ಲಿ ಜನಿಸಿದ ಇವರು ಮಹಾತ್ಮಗಾಂಧೀಜಿಯವರಿಂದ ಪ್ರಭಾವಿತರಾಗಿ ಬಾಲ್ಯದಲ್ಲಿಯೇ ಹೋರಾಟದ ಕಡೆಗೆ ಮನ ಮಾಡಿದವರು. ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಇವರು 14 ತಿಂಗಳು ಸೆರಮನೆ ವಾಸ ಅನುಭವಿಸಿದ್ದಾರೆ.

ಕರ್ನಾಟಕ ಏಕೀಕರಣ ಚಳುವಳಿ, ಭೂದಾನ ಚಳುವಳಿ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಚಳುವಳಿ, ಬೆಂಗಳೂರಿನ ಭೂಗಳ್ಳರ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಇವರು ತಮ್ಮ ಇಳಿ ವಯಸ್ಸಿನಲ್ಲೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವವರು.

ನಾಡೋಜಎನ್.ಸಂತೋಷ್ ಹೆಗ್ಡೆ


ನ್ಯಾಯಮೂರ್ತಿ ಡಾ.ಸಂತೋಷ್ ಹೆಗ್ಡೆಯವರು ಮೂಲತ: ಉಡುಪಿ ಜಿಲ್ಲೆಯ ನಿಟ್ಟೆಯವರು. ಎಡ್ವಕೇಟ್‌ ಜನರಲ್ ಆಗಿ ವೃತ್ತಿಜೀವನ ಆರಂಭಿಸಿದ ಸಂತೋಷ್ ಹೆಗ್ಡೆಯವರು ಕಾನೂನು ಕ್ಷೇತ್ರದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದವರು.

ಎಡಿಷನಲ್ ಸೊಲಿಸಿಟರ್ ಜನರಲ್‌ ಆಫ್‌ ಇಂಡಿಯಾ ಆಗಿ ಕರ್ನಾಟಕದಿಂದ ನೇಮಕವಾದ ಮೊದಲಿಗರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರು. 1999ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ಇವರು 2006ರಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ನೇಮಕಗೊಂಡು ತನ್ನ ಪಾರದರ್ಶ ಕಾರ್ಯವೈಖರಿಯ ಮೂಲಕ ಜನಮಾನಸದಲ್ಲಿ ಸದೃಢವಾಗಿ ನೆಲೆ ನಿಂತವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವಕ್ಕೆ ಪಾತ್ರರಾಗಿರುವ ಸಂತೋಷ ಹೆಗ್ಡೆಯವರು ಮಂಗಳೂರು, ಮೈಸೂರು (ಮುಕ್ತ), ತುಮಕೂರು ಹಾಗೂ ಧಾರವಾಡದ ಕಾನೂನು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.

ಪ್ರೊ. ತೇಜಸ್ವಿ ಕಟ್ಟೀಮನಿ


ಮೂಲತ: ಧಾರವಾಡದವರಾದ ಪ್ರೊ.ತೇಜಸ್ವಿ ಕಟ್ಟೀಮನಿಯವರು ಹಿಂದಿ ಪ್ರಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ಹಿಂದಿ, ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮಹತ್ತ್ವದ ಕೃತಿಗಳನ್ನು ರಚಿಸಿದ್ದಾರೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ನ್ಯಾಕ್ ಪೀರ್‌ ತಂಡದ ಅಧ್ಯಕ್ಷರಾಗಿ, ಭಾರತ ಸರಕಾರದ ಆದಿವಾಸಿ ಸಚಿವಾಲಯದ ಆದಿವಾಸಿ ಕಲ್ಯಾಣ ಸ್ಥಾಯಿ ಸಮಿತಿ, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ, ಯುಜಿಸಿ ಯೋಜನಾ ಸಮಿತಿ ಮೊದಲಾದ ಪ್ರಮುಖ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಇವರು ದಲಿತ ಸಾಹಿತ್ಯ ಮತ್ತು ಭಾಷಾಂತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ ಭಾಷಾ ಸಮ್ಮಾನ್, ಗಂಗಾಶರಣ್‌ ರಾಷ್ಟ್ರೀಯ ಪ್ರಶಸ್ತಿ, ಸೃಜನಶೀಲ ಅನುವಾದ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. 

ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ


'ಕನ್ನಡದ ಪ್ರಮುಖ ಕವಿ, ಕಥೆಗಾರ, ವಿಮರ್ಶಕ, ಅಂಕಣಕಾರ ಹಾಗೂ ಅನುವಾದಕರಾಗಿ ಹೆಸರುವಾಸಿಯಾದ ಡಾ.ಸಿದ್ಧಲಿಂಗ ಪಟ್ಟಣ ಶೆಟ್ಟಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ನಿವೃತ್ತರು. ರಂಗಾಯಣ, ಪರಿಭಾವನ ಮುಂತಾದ ವಿಮರ್ಶಾ ಕೃತಿಗಳು, ಚೋರಚರಣದಾಸ, ಮುದ್ರಾರಾಕ್ಷಸ ಮುಂತಾದ ಅನುವಾದ ನಾಟಕಗಳು ಹಾಗೂ ಅಯಸ್ಕಾಂತ, ಅಪರಂಪಾರ ಮುಂತಾದ 16 ಕವನ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಅಂಕಣ ಬರಹದ ಮೂಲಕ ಉತ್ತರ ಕರ್ನಾಟಕದ ಭಾಷೆಯ ಸೊಗಸನ್ನು ನಾಡಗಲ ವಿಸ್ತರಿಸಿದ ಇವರು 'ಸಂಕ್ರಮಣ' ಮತ್ತು 'ಸಂಕಲನ' ಎಂಬ ಸಾಹಿತ್ಯ ಪತ್ರಿಕೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದವರು.

ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ, ನಾಟಕ ಅಕಾಡಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಇವರಿಗೆ ಸಂದಿವೆ.

ಡಾ.ವಿಜಯಾದಬ್ಬೆ


'ಹಾಸನ ಜಿಲ್ಲೆಯ ದಬ್ಬೆ ಹುಟ್ಟೂರಿನವರಾದ ಕವಯಿತ್ರಿ, ವಿಮರ್ಶಕಿ ಡಾ. ವಿಜಯಾ ದಬ್ಬೆಯವರು ಮಹಿಳಾ ಪರ ಹೋರಾಟ ಹಾಗೂ ಸ್ತ್ರೀವಾದಿ ಚಿಂತನೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದವರು.

1978ರಲ್ಲಿ ಲಿಂಗಾಧಾರಿತ ಸಮಾಜ ಬದಲಾವಣೆಯ ಸಲುವಾಗಿ ಸಮತಾ ವೇದಿಕೆಯನ್ನು ಹುಟ್ಟು ಹಾಕಿ ಕಾರ್ಯ ಪ್ರವೃತ್ತರಾದವರು.12 ಕೃತಿಗಳು ಹಾಗೂ 60ಕ್ಕೂ ಹೆಚ್ಚು ಲೇಖನಗಳು ಇವರ ಲೇಖನಿಯಿಂದ ಒಡಮೂಡಿದೆ. ಚೇತನ ಕನ್ನಡ ಸಂಘದ 'ಪುಸ್ತಕ ಪುರವಣಿ'ಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರ ನೆಲೆ ಒದಗಿಸುವ ಉದ್ದೇಶದ 'ಶಕ್ತಿಧಾಮ'ದ ಖಜಾಂಚಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಪ್ರೊ. ಕೆ.ಬಿ.ಸಿದ್ದಯ್ಯ


ತುಮಕೂರಿನ ಕವಿಗಳಾದ ಪ್ರೊ. ಕೆ.ಬಿ. ಸಿದ್ದಯ್ಯ ಅವರು ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು. ದಲಿತ ಕವಿ, ಸಾಹಿತಿ ಹಾಗೂ ಪ್ರಗತಿಪರ ಹೋರಾಟಗಾರರಾಗಿ ಹೆಸರು ವಾಸಿಯಾದ ಇವರು ಅನುಭಾವಿ ಪರಂಪರೆ ಮತ್ತು ಬೌದ್ಧತಾತ್ತ್ವಿಕ ಪರಂಪರೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದವರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರಾದ ಇವರು ದೇವರಾಜ ಅರಸು ಹೋರಾಟ ವೇದಿಕೆ, ಜಾತ್ಯತೀತ ಮಾನವ ವೇದಿಕೆಗಳಲ್ಲಿ ಕ್ರಿಯಾಶೀಲರಾಗಿ ದಲಿತ ಚಳುವಳಿ ಮತ್ತುರೈತ ಚಳುವಳಿಗಳನ್ನು ತಾತ್ತ್ವಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆಯುವಲ್ಲಿ ಶ್ರಮಿಸಿದವರು.ನಾಲ್ಕು ಸ್ವತಂತ್ರ ಕೃತಿ, ಎರಡು ಸಂಪಾದನೆ, ಒಂದು ಅನುವಾದ ಮೊದಲಾದ ಹಲವು ಕೃತಿಗಳು ಇವರ ಲೇಖನಿಯಿಂದ ಒಡಮೂಡಿವೆ.

ಪ್ರೊ.ಜಿ.ಎಚ್. ಹನ್ನೆರಡುಮಠ

'ಮೈಸೂರು ಜಿಲ್ಲೆಯ ಹೆಬ್ಬಾಳದವರಾದ ಪ್ರೊ.ಜಿ.ಎಚ್. ಹನ್ನೆರಡುಮಠ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಕೂಗಿತ್ತು ಕೂಡಲ ಸಂಗಮ, ಗುರುಮನೆ ಯಿಂದ ಅರಮನೆಗೆ, ಮಹಾಕಲ್ಯಾಣ ಮುಂತಾದ 17 ಕಾದಂಬರಿಗಳನ್ನು ಚೈತ್ಯ ಪಕ್ಷಿ, ಗಾನತರಂಗ, ಬಯಲಬಾಲೆ ಮುಂತಾದ 16 ಕವನ ಸಂಕಲನಗಳು, ಮಹಾತಪಸ್ವಿ, ಜಗದಂಬೆ ಬೆಟ್ಟದ ಚೆಲುವಿ, ಕೊರವ ಸುಂದರಿ ಮುಂತಾದ 34 ನಾಟಕಗಳು, ಕನಕಾಂಬರಿಕಂಡೆ, ಜಿಲೇಬಿ ಹೆಂಡ್ತಿ ಮುಂತಾದ 19 ಸಣ್ಣಕತೆಗಳು ಹಾಗೂ ಲಲಿತ ಪ್ರಬಂಧ, ಪ್ರವಾಸಕಥನ, ವ್ಯಕ್ತಿ ಚಿತ್ರಣ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನೂರಕ್ಕೂ ಅಧಿಕ  ಕೃತಿಗಳ ರಚನೆಕಾರರು ಇವರು.

ರಮಣಶ್ರೀ ಸಾಹಿತ್ಯ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿ-ಸನ್ಮಾನಗಳಿಗೆ ಇವರು ಭಾಜನರು.

ಪ್ರೊ.ಬಿ.ಸುರೇಂದ್ರರಾವ್


'ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಬಿ.ಸುರೇಂದ್ರರಾವ್‌ ಅವರು ಆಧುನಿಕ ಭಾರತದ ಇತಿಹಾಸ, ಇತಿಹಾಸ ತತ್ವ ಮತ್ತು ಇತಿಹಾಸ ರಚನಾ ಶಾಸ್ತ್ರದಲ್ಲಿ ತಜ್ಞರು.

ಕರ್ನಾಟಕ ಇತಿಹಾಸ ಕುರಿತು ಇವರು ಸಂಪಾದಿಸಿದ ಏಳು ಸಂಪುಟಗಳ ಅಪರೂಪ ಎಂಬ ಕೃತಿಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದೆ. ಇತಿಹಾಸ ಮತ್ತು ಸಮಾಜ, ಇತಿಹಾಸ ಮತ್ತು ಇತಿಹಾಸ ರಚನಾ ಶಾಸ್ತ್ರ ಮುಂತಾದ ಹಲವು  ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.

ಇವರ ಸಂಪಾದನೆಯ 'ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಚರಿತ್ರೆಯ ಕೆಲವು ನೆಲೆಗಳು' ಎಂಬ ಕೃತಿಯನ್ನು ಬೆಂಗಳೂರಿನ ಕುವೆಂಪು ಭಾಷಾಭಾರತಿ ಪ್ರಕಟಿಸಿದೆ. 114 ಆಧುನಿಕ ತುಳು ಕವಿತೆಗಳನ್ನು (ಡಾ.ಚಿನ್ನಪ್ಪಗೌಡರಜೊತೆಗೆ) ಇಂಗ್ಲಿಷಿಗೆ ಅನುವಾದಿಸಿದ್ದಾರೆ. ತುಳು ಜನಪದ ಹಾಡು ಮತ್ತು ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಇಂಗ್ಲೀಷ್ ಮತ್ತು ಸಂಸ್ಕೃತಿ ಕುರಿತ ಅಧ್ಯಯನವನ್ನು ಪರಿಗಣಿಸಿ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿಗಳು ಇವರಿಗೆ ಸಂದಿವೆ.

ಡಾ. ಎಂ. ಪ್ರಭಾಕರ ಜೋಶಿ

'ಕಾರ್ಕಳ ತಾಲೂಕಿನವರಾದ ಡಾ.ಎಂ.ಪ್ರಭಾಕರ ಜೋಶಿಯವರು ವೃತ್ತಿಯಲ್ಲಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರು. ಯಕ್ಷಗಾನ ತಾಳಮದ್ದಲೆಯ ಅಗ್ರಶ್ರೇಣಿಯ ಅಥರ್ರ್ಧಾರಿಯಾಗಿ, ವಿರ್ಮಶಕರಾಗಿ ಪ್ರಸಿದ್ಧರು. ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ ಮತ್ತು ಮಿಮಾಂಸೆಯ ಕ್ಷೇತ್ರಗಳನ್ನು ಅಂತರ್‌ಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಿದವರು. ಯಕ್ಷಗಾನ ಪದಕೋಶ, ಭಾರತೀಯತತ್ತ್ವಶಾಸ್ತ್ರ, ಕೃಷ್ಣಸಂಧಾನ : ಪ್ರಸಂಗ ಮತ್ತು ಪ್ರಯೋಗ ಮುಂತಾದ ಹಲವು ಕೃತಿಗಳು ಹಾಗೂ ತಾತ್ತ್ವಿಕ ಚಿಂತನೆಗಳಿಂದ ಕೂಡಿದ ಪ್ರವಚನಗಳ ಮೂಲಕ ಚಿರಪರಿಚಿತರು. ಯಕ್ಷಗಾನ ವಿಮರ್ಶೆಗೆ ಅಕಾಡೆಮಿಕ್‌ ಆಯಾಮ ನೀಡಿದ ಇವರಿಗೆ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಗ್ರಂಥ ಪುರಸ್ಕಾರ ಮೊದಲಾದ ನಾಡಿನ ಹಲವು ಪ್ರಶಸ್ತಿ ಗೌರವಗಳು ಸಂದಿವೆ.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್


'ತೂಗು ಸೇತುವೆಗಳ ಸರದಾರರೆಂದೇ ಪ್ರಸಿದ್ಧರಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ ಇದುವರೆಗೆ 133 ತೂಗು ಸೇತುವೆಗಳನ್ನು ಕರ್ನಾಟಕ, ಆಂಧ್ರ, ಒರಿಸ್ಸಾ, ಕೇರಳ ರಾಜ್ಯಗಳಲ್ಲಿ ನಿರ್ಮಿಸಿದ್ದಾರೆ.

ದಕ್ಷಿಣ ಕನ್ನಡಜಿಲ್ಲೆಯ ಸುಳ್ಯ ಮೂಲದ ಇವರು 1973ರಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್ ಪದವಿಯನ್ನು ಮಂಡ್ಯದ ಪಿ.ಇ.ಎಸ್‌ ಕಾಲೇಜಿನಿಂದ ಪಡೆದು ತಂದೆಯ ಅಣತಿಯಂತೆ ಸುಳ್ಯದಲ್ಲಿ ಸಣ್ಣ ವರ್ಕ್‌ಶಾಪ್ ಪ್ರಾರಂಭಿಸಿದರು. ಕುಗ್ರಾಮಗಳನ್ನು ನಗರಗಳೊಂದಿಗೆ ಬೆಸೆಯುವ ಕಾರ್ಯದ ಮೊದಲ ಪ್ರಯತ್ನವಾಗಿ 1986ರಲ್ಲಿ ತಮ್ಮಊರಿನಲ್ಲೇ ಮೊದಲ ತೂಗು ಸೇತುವೆಯನ್ನುಇವರು ನಿರ್ಮಿಸಿದರು. ಇತ್ತೀಚೆಗೆ ಸುಳ್ಯದ ಪಯಸ್ವಿನಿ ನದಿಗೆ ಕಟ್ಟಿದ ರೋಟರಿ-ಇನ್ಫೋಸಿಸ್ ಸೇತುವೆ ಜನಾಕರ್ಷಣೆಯ ಕೇಂದ್ರವಾಗಿದ್ದು ಪ್ರೇಕ್ಷಣೀಯ ಸ್ಥಳವೂ ಆಗಿದೆ.

ಪದ್ಮರಾಜ ದಂಡಾವತಿ


ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಹೆಸರುವಾಸಿಯಾದ ಪದ್ಮರಾಜ ದಂಡಾವತಿಯವರು ಅಂಕಣಕಾರರಾಗಿ ಪ್ರಸಿದ್ಧರು. ಸತತ 8 ವರ್ಷಗಳಿಂದ ಅವರು ಪ್ರತಿ ರವಿವಾರ ಪ್ರಜಾವಾಣಿಯಲ್ಲಿ ಬರೆದ 'ನಾಲ್ಕನೇ ಆಯಾಮ' ಅಂಕಣ ತನ್ನ ವಿಚಾರ ಮತ್ತು ವಿಷಯ ವೈವಿಧ್ಯಗಳಿಂದಾಗಿ, ದಿಟ್ಟತನದಿಂದಾಗಿ, ಖಚಿತತೆ ಹಾಗೂ ಹೊಸ ಒಳನೋಟಗಳಿಂದಾಗಿ ಬಹು ಜನಪ್ರಿಯವಾಗಿದೆ.

ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕನಂಥ ಉನ್ನತ ಹುದ್ದೆಯಲ್ಲಿ ಇದ್ದ ಒಬ್ಬರು ಅತಿ ದೀರ್ಘ ಅವಧಿ ಬರೆದ ಅಂಕಣ ಇದು ಎಂಬುದು ಒಂದು ದಾಖಲೆಯೇ ಆಗಿದೆ. ನಾಲ್ಕನೇ ಆಯಾಮ ಅಂಕಣ ಬರಹದ ಆರು ಸಂಪುಟಗಳು ಒಳಗೊಂಡಂತೆ ಹಲವು ಕೃತಿಗಳನ್ನು ಇವರು ರಚಿಸಿದ್ದಾರೆ. 

ರತ್ನಮಾಲಾ ಪ್ರಕಾಶ್


ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ರತ್ನಮಾಲಾ ಪ್ರಕಾಶ್‌ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ಪದ್ಮಭೂಷಣ, ಸಂಗೀತ ಕಲಾನಿಧಿ ಡಾ.ಆರ್.ಕೆ.ಶ್ರೀಕಂಠನ್ ಅವರ ಸುಪುತ್ರಿ.

ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿತದ ನಂತರ ಸುಗಮ ಸಂಗೀತದ ಕಡೆಗೆ ಆಕರ್ಷಿತರಾದ ಇವರು ಸುಮಾರು 500 ಕ್ಕೂ ಹೆಚ್ಚು ಆಲ್ಬಮ್‌ಗಳಲ್ಲಿ, ಹಲವು ಪ್ರಸಿದ್ಧ ಸಿನಿಮಾಗಳಲ್ಲಿ ತಮ್ಮಇಂಪಾದ ಕಂಠ ಮಾಧುರ್ಯದ ಮೂಲಕ ಜನಮಾನಸ ತಲುಪಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕರುಗಳಾದ ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ರಾಜನ್ ನಾಗೇಂದ್ರ, ಜಿ.ಕೆ.ವೆಂಕಟೇಶ್, ಎಲ್.ವೈದ್ಯನಾಥನ್ ಹಾಗೂ ಖ್ಯಾತ ರಂಗಭೂಮಿ ನಿರ್ದೇಶಕರಾದ ಬಿ.ವಿ.ಕಾರಂತರ ಜೊತೆಗೆ ಕಾರ್ಯನಿರ್ವಹಿಸಿದ ಅನುಭವ ಇವರದು.

ಡಾ.ತೋನ್ಸೆ ವಿಜಯ್‌ಕುಮಾರ್ ಶೆಟ್ಟಿ


ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ 60 ಪಾತ್ರಗಳ 60 ಸ್ವರಗಳ 60 ಭಿನ್ನ ವಸ್ತ್ರಾಭರಣಗಳ ಮೂಲಕ ಸತತ 13 ಗಂಟೆ ಅಭಿನಯಿಸಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ರಂಗಭೂಮಿಯ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಪ್ರತಿಭಾ ಸಂಪನ್ನರು ಇವರು.

ಮುಂಬೈಯ ಕಲಾ ಜಗತ್ತು ಸಂಸ್ಥೆಯ ನಿರ್ದೇಶಕರಾಗಿ, ಚಿಣ್ಣರಬಿಂಬ, ಅಮ್ಮಚಾವಡಿ ಸೇವಾ ಕೇಂದ್ರ, ಕಲಾಜಗತ್ತು ಸರಿಗಮಪದನಿ ಸಂಗೀತ ತಂಡ, ತುಳುಕೂಟ ಡೊಂಬಿವಿಲಿ ಮುಂತಾದ ಸಂಘಟನೆಗಳ ಮೂಲಕ ಹೊರನಾಡಿನ ಸಾಂಸಕ್ಕೃತಿಕ ರಾಯಭಾರಿಯಾಗಿ ಖ್ಯಾತರಾದವರು. ಡಾ.ತೋನ್ಸೆ ವಿಜಯ್‌ ಕುಮಾರ್ ಶೆಟ್ಟಿಯವರು. ಇತ್ತೀಚಿನ ಪತ್ತನಾಜೆ, ತುಳುವೆರೆ ಪರ್ಬ, ತುಳು ಚಲನಚಿತ್ರಗಳು ಇವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬಂದಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ


'ಕುಂದಾಪುರ ತಾಲೂಕಿನ ಕೋಟೇಶ್ವರದವರಾದ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು ತಮ್ಮ 11ನೇ ವಯಸ್ಸಿನಲ್ಲಿ ತಂದೆಯ ಜೊತೆ ಮರದ ಕೆತ್ತನೆ ಆರಂಭಿಸಿದವರು. ಇದುವರೆಗೆ 100 ರಥಗಳನ್ನು ನಿರ್ಮಿಸಿದ ರಥಶಿಲ್ಪಿ'ಎಂಬ ಹೆಗ್ಗಳಿಕೆ ಪಾತ್ರರಾದವರು.

ವಿವಿಧ ದೇವಸ್ಥಾನಗಳಿಗೆ 26 ಪಲ್ಲಕ್ಕಿ ಹಾಗೂ ಗರ್ಭಗುಡಿಯ ಹೆಬ್ಬಾಗಿಲುಗಳನ್ನು ಇವರು ನಿರ್ಮಿಸಿದ್ದಾರೆ. ಕೋಟೇಶ್ವರದಲ್ಲಿ 1966ರಲ್ಲಿ ವಿಶ್ವಕರ್ಮ ಸಂಘಸ್ಥಾಪಿಸಿ 32 ವರ್ಷ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಹ್ಯಾಂಡಿಕ್ರಾಫ್ಟ್ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ 12 ವರ್ಷ ಸೇವೆ ಸಲ್ಲಿಸಿದ ಇವರು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರಥ ಶಿಲ್ಪಿಯಾಗಿ, ಸಂಘಟಕರಾಗಿ ಹೆಸರುವಾಸಿಯಾದ ಇವರು ಕರ್ನಾಟಕ ಶಿಲ್ಪಕಲಾ ಅಕಾಡಮಿ ಹಾಗೂ ರಾಷ್ಟ್ರೀಯ ಶಿಲ್ಪ ಗುರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News