ಸುಝ್ಲನ್ ಕಂಪೆನಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ: ಅಧಿಕಾರಿಗಳು, ಕಾರ್ಮಿಕರೊಂದಿಗೆ ಮಾತುಕತೆ
ಪಡುಬಿದ್ರೆ, ನ.16: ಕಾರ್ಮಿಕರ ಅಸಹಕಾರದ ನೆಪವೊಡ್ಡಿ ಲಾಕೌಟ್ ಘೋಷಿಸಿರುವ ಸುಜ್ಲಾನ್ ಕಂಪೆನಿಗೆ ಗುರುವಾರ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್‌ರೊಂದಿಗೆ ಭೇಟಿ ನೀಡಿ, ಕಂಪೆನಿಯ ಮುಖ್ಯಸ್ಥರು, ಕಾರ್ಮಿಕ ಮುಖಂಡರು, ಕಾರ್ಮಿಕರೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕಳೆದೆರಡು ದಿನಗಳಿಂದ ಸುಜ್ಲಾನ್ ಕಂಪೆನಿ ಎದುರು ಕಾರ್ಮಿಕರು ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಮುಂದಿನ ವಾರದಲ್ಲಿ ಕಾರ್ಖಾನೆಯನ್ನು ಪುನರಾರಂಭಿಸುವ ಕುರಿತಂತೆ ಯಾವುದೇ ನಿರ್ಧಾರವನ್ನು ಪ್ರಕಟಿಸುವುದಾಗಿ ಕಂಪೆನಿಯ ಆಡಳಿತ ಮಂಡಳಿ ಪ್ರಕಟಿಸಿದೆ.
ಕಳೆದ ಮಂಗಳವಾರ ಸುಜ್ಲಾನ್ ಕಂಪೆನಿ ಲಾಕೌಟ್ ಘೋಷಣೆ ಮಾಡಿದ ದಿನದಿಂದ ಕಂಪೆನಿ ದ್ವಾರದ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು, ಕಂಪೆನಿ ಯನ್ನು ಪುನರಾರಂಭಿಸಬೇಕು ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದರು. ಗುರುವಾರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂಟೆಕ್ ಕಾರ್ಮಿಕ ರಿಗೆ ಬೆಂಬಲ ಸೂಚಿಸಿತ್ತು. ಇದು ಅಪರಾಹ್ನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಎಸ್ಪಿ ಡಾ.ಸಂಜೀವ ಎಂ. ಪಾಟೀಲ್ ಧರಣಿ ನಿರತ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಮಂಗಳೂರು ಎಸ್‌ಇಝಡ್‌ನ ಪಡುಬಿದ್ರಿ ಕಛೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಡಾ. ಸಂಜೀವ ಪಾಟೀಲ್ ಕಂಪೆನಿ ಮುಖ್ಯಸ್ಥರಿಗೆ ಕಾರ್ಮಿಕರ ಹೇಳಿಕೆಯನ್ನು ಮನದಟ್ಟು ಮಾಡಿದರು. ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ, ಕಾರ್ಮಿಕರ ಹಿತದೃಷ್ಟಿಯಿಂದ ಘಟಕವನ್ನು ಶೀಘ್ರವೇ ಪುನರಾರಂಭಿಸುವಂತೆ ಮನವಿ ಮಾಡಿದರು.
ಸುಜ್ಲಾನ್ ಕಾರ್ಪೋರೇಟ್‌ನ ಡೈರೆಕ್ಟರ್ ಆಫ್ ಆಪರೇಷನ್ಸ್ (ಬ್ಲೇಡ್ಸ್) ಬಿ. ವಿಜಯ್ ಅಸ್ನಾನಿ ಸಭೆಯಲ್ಲಿ ಮಾತನಾಡಿ, ಪವನ ಯಂತ್ರ ಘಟಕಗಳು ಈಗ ವಿಶ್ವದಲ್ಲೇ ನಷ್ಟದಲ್ಲಿ ಕಾರ್ಯಾಚರಿಸುತ್ತಿದೆ. ವಿಶ್ವದಾದ್ಯಂತ ಕಾರ್ಯಾಚರಿಸುತ್ತಿ ರುವ ಸುಜ್ಲಾನ್ ಕಂಪನಿ, ಪಡುಬಿದ್ರಿ ಘಟಕ ಆರಂಭವಾದಂದಿನಿಂದ ಸಂಕಷ್ಟ ಪರಿಸ್ಥಿತಿಯಲ್ಲಿದೆ. ಇತ್ತೀಚೆಗೆ ಸರಕಾರದ ಧೋರಣೆಯಿಂದಉತ್ಪನ್ನಗಳ ಮಾರಾಟ ಸ್ಥಗಿತಗೊಂಡಿದೆ. ಕಂಪೆ ಮುಖ್ಯಸ್ಥರು ಸೇರಿದಂತೆ ಎಲ್ಲರ ಸಂಬಳ, ಭತ್ಯೆಗಳನ್ನು ಕಡಿಮೆ ಮಾಡಲಾಗಿದೆ ಎಂದರು.
ಪ್ರತಿ ತಿಂಗಳು ಸಭೆ: ಪ್ರತೀ ತಿಂಗಳಿಗೊಮ್ಮೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಭೆ ನಡೆಸಬೇಕು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ಕಂಪೆನಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮೂರು ತಿಂಗಳ ಬಳಿಕ ಪರಿಶೀಲನೆ ನಡೆಸಿ ಯಾವುದೇ ಬದಲಾವಣೆಗಳಾಗದಿದ್ದಲ್ಲಿ ಸಮನ್ವಯ ಸಮಿತಿ ರಚಿಸುವ ಬಗ್ಗೆ ತೀರ್ಮಾನಿಸಲಾಗುವುದು. ಕಂಪೆನಿಯಿಂದ ಯಾವುದೇ ತೊಂದರೆ ಯಾದಲ್ಲಿ ನೇರವಾಗಿ ಸ್ಥಳೀಯ ಠಾಣೆಗೆ ಬಂದು ದೂರು ನೀಡಿದರೆ, ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ನೀಡಿದರು.
ಕೊಚ್ಚಿ (ಕೇರಳ) ವಿಶೇಷ ಅರ್ಥಿಕ ವಲಯದ ಎಡಿಜಿ ಅಜಯಕುಮಾರ್, ಮಂಗಳೂರಿನ ಎಡಿಸಿ ಶೋಭಿಂದ್ರ, ಕಾರ್ಮಿಕ ಇಲಾಖೆ ಅಧಿಕಾರಿ ವಿಶ್ವನಾಥ್, ರಾಮಮೂರ್ತಿ, ಕಂಪೆನಿ ಯೋಜನಾ ಮುಖ್ಯಸ್ಥ ಅಶೋಕ್‌ಕುಮಾರ್ ಶೆಟ್ಟಿ, ಅಧಿಕಾರಿಗಳಾದ ಆ್ಯಂಟನಿ ಫಿಲಿಪ್, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ಮಂಗಳೂರು ಅಧ್ಯಕ್ಷ ಮನೋಹರ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ವೈ. ದೀಪಕ್, ನವೀನಚಂದ್ರ ಸುವರ್ಣ ಉಪಸ್ಥಿತರಿದ್ದರು.
ಸೋಮವಾರ ನಿರ್ಧಾರ ಪ್ರಕಟ
ಉತ್ಪಾದನಾ ವೆಚ್ಚ ಸಹಿತ ವಿವಿಧ ಸಮಸ್ಯೆಗಳನ್ನು ಕಂಪೆನಿ ಎದುರಿಸುತ್ತಿದೆ. ಕಾನೂನು ಬಾಹಿರವಾಗಿ ಲಾಕೌಟ್ ಮಾಡಿಲ್ಲ. ನ.14ರಂದೇ ನೋಟಿಸ್ ಜಾರಿ ಮಾಡಲಾಗಿದೆ. 29ರಂದು ಲಾಕೌಟ್ ಮಾಡಲಾಗಿದೆ. ಈ ದಿನಗಳವರೆಗಿನ ವೇತನವನ್ನು ಪಾವತಿ ಮಾಡಲಾಗುತ್ತದೆ. ಕಂಪೆನಿಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಮಿಕರು ಕಂಪೆನಿಯೊಂದಿಗಿನ ಸಮಸ್ಯೆಗಳನ್ನು ಸೌಹಾದರ್ಯುತವಾಗಿ ಬಗೆಹರಿಸಿಕೊಳ್ಳಬೇಕು. ಕಾರ್ಮಿಕರು ಆಂತರಿಕ ಸಮಸ್ಯೆಗಳನ್ನು ಬದಿಗಿರಿಸಿ ಕಂಪೆನಿಯ ಒಳಿತಿಗಾಗಿ ದುಡಿಯಬೇಕು. ಕಾರ್ಮಿಕರ ತೊಂದರೆಯಿಂದ ಕಂಪೆನಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು. ಈ ಬಗ್ಗೆ ಕಂಪೆನಿ ಉನ್ನತಾಧಿಕಾರಿಗಳು ಮರುಪರಿಶೀಲನೆ ನಡೆಸಲಿದ್ದಾರೆ. ಮುಂದಿನ ಸೋಮವಾರ ನಿರ್ಧಾರ ಪ್ರಕಟಿಸಲಾಗುವುದು. ಅಲ್ಲಿವರೆಗೆ ಧರಣಿಯನ್ನು ಹಿಂಪಡೆಯಬೇಕೆಂದು ಸುಝ್ಲಾನ್‌ನ ಬಿ.ವಿಜಯ್ ಅಸ್ನಾನಿ ವಿನಂತಿಸಿದರು.