ಸಮುದ್ರ ಉಕ್ಕಿದರೆ ಮುಂಬೈಗಿಂತ ಮೊದಲು ಮಂಗಳೂರು ಆಹುತಿ
ಹೊಸದಿಲ್ಲಿ,ನ.16: ನೀರ್ಗಲ್ಲುಗಳ ಕರಗುವಿಕೆಯಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾದರೆ ಮುಂಬೈ ಮತ್ತು ನ್ಯೂಯಾರ್ಕ್‌ಗಳಂತಹ ನಗರಗಳಿಗೆ ಹೋಲಿಸಿದರೆ ಮಂಗಳೂರು ಮುಳುಗಡೆಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ ಎಂದು ಅಮೆರಿಕದ ನಾಸಾ ಸಂಸ್ಥೆಯ ಇತ್ತೀಚಿನ ಅಧ್ಯಯನ ವರದಿಯು ಹೇಳಿದೆ.
ನೀರ್ಗಲ್ಲುಗಳು ಕರಗಿದರೆ ಸಮುದ್ರ ಮಟ್ಟವು ಏರಿಕೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ, ಆದರೆ ವಿವಿಧ ಪ್ರದೇಶಗಳಲ್ಲಿಯ ನೀರ್ಗಲ್ಲುಗಳ ಕರಗುವಿಕೆಯಿಂದ ಕರಾವಳಿ ನಗರಗಳಲ್ಲಿ ಸ್ಥಳೀಯ ಸಮುದ್ರ ಮಟ್ಟ ದಲ್ಲಿ ಏರಿಕೆಯಾಗುವುದು ಹೇಗೆ ಎನ್ನುವುದು ಮಾತ್ರ ಅಷ್ಟಾಗಿ ಅರ್ಥವಾಗುವುದಿಲ್ಲ.
ಇದೀಗ ನಾಸಾ ವಿಜ್ಞಾನಿಗಳು ಹೊಸದಾಗಿ ಅಭಿವೃದ್ಧಿಗೊಳಿಸಿರುವ ಗ್ರೇಡಿಯಂಟ್ ಫಿಂಗರ್‌ಪ್ರಿಂಟ್ ಮ್ಯಾಪಿಂಗ್(ಜಿಎಫ್‌ಎಂ) ಅದನ್ನು ತಿಳಿದುಕೊಳ್ಳಲು ನಗರ ಯೋಜಕರಿಗೆ ಮತ್ತು ಜನರಿಗೆ ಸಾಧ್ಯವಾಗಿಸುತ್ತದೆ.
ಸ್ಥಳೀಯ ಅಂಶಗಳು ಪ್ರಮುಖ ಪಾತ್ರವನ್ನು ವಹಿಸುವುದರಿಂದ ನೀರ್ಗಲ್ಲುಗಳ ಕರಗುವಿಕೆಯಿಂದ ಸಮುದ್ರ ಮಟ್ಟ ಏರಿಕೆ ವಿಶ್ವಾದ್ಯಂತ ಏಕರೂಪವಾಗಿರುವುದಿಲ್ಲ ಎನ್ನುವುದನ್ನು ನಾಸಾ ಅಧ್ಯಯನವು ಬೆಟ್ಟು ಮಾಡಿದೆ. ಅಂಟಾರ್ಕ್ಟಿಕಾ ಮತ್ತು ಗ್ರೀನ್‌ಲ್ಯಾಂಡ್‌ಗಳಲ್ಲಿ ಒಂದೇ ಪ್ರಮಾಣದಲ್ಲಿ ಹಿಮಗಡ್ಡೆಗಳು ಕರಗಿದರೆ ಮುಂಬೈ (1.526 ಮಿ.ಮೀ.)ಗೆ ಹೋಲಿಸಿದರೆ ಮಂಗಳೂರಿನಲ್ಲಿ ಸಮುದ್ರ ಮಟ್ಟ ಏರಿಕೆ ಅಧಿಕ(1.598 ಮಿ.ಮೀ.)ವಾಗಿರುತ್ತದೆ.
ನೀರ್ಗಲ್ಲುಗಳ ಕರಗುವಿಕೆ ತಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಬಯಕೆ ಜನರಿಗೆ ಇರಬಹುದು. ಈಗ ನಾಸಾದ ಜಿಎಂಎಫ್ ಬಳಸಿ ತಮ್ಮ ನಗರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ತಿಳಿದುಕೊಳ್ಳಬಹು ದಾಗಿದೆ ಎನ್ನುತ್ತಾರೆ ನಾಸಾ ಅಧ್ಯಯನ ತಂಡದ ಸದಸ್ಯ ಡಾ.ಸುರೇಂದ್ರ ಅಧಿಕಾರಿ.
ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯ ಸಂಶೋಧಕರು ಮಂಗಳೂರು ಸೇರಿದಂತೆ ವಿಶ್ವದ ಪ್ರಮುಖ 293 ನಗರಗಳಿಗೆ ಜಿಎಫ್‌ಎಂ ಅನ್ವಯಿಸಿ ಫಲಿತಾಂಶ ಗಳನ್ನು ಕಂಡುಕೊಂಡಿದ್ದಾರೆ.
ಈ ಜಗತ್ತಿನಲ್ಲಿಯ ಶೇ.75ರಷ್ಟು ಸಿಹಿನೀರು ನೀರ್ಗಲ್ಲುಗಳಲ್ಲಿ, ಹೆಚ್ಚಾಗಿ ಅಂಟಾರ್ಕ್ಟಿಕಾ ಮತ್ತು ಗ್ರೀನ್‌ಲ್ಯಾಂಡ್‌ಗಳಲ್ಲಿ ಶೇಖರಗೊಂಡಿದೆ. ಇವೆರಡೂ ಪ್ರದೇಶಗಳಲ್ಲಿಯ ಮಂಜುಗಡ್ಡೆಗಳ ಪದರಗಳ ಕರಗುವಿಕೆ ಸಮುದ್ರ ಮಟ್ಟ ಏರಿಕೆಯಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತವೆ. ಜಿಎಫ್‌ಎಂ ಎಷ್ಟು ಮಂಜುಗಡ್ಡೆ ನಷ್ಟವಾಗಿದೆ ಎನ್ನುವುದನ್ನು ಪತ್ತೆ ಹಚ್ಚುವುದರೊಂದಿಗೆ ಮಂಜುಗಡ್ಡೆ ಪದರದ ದಪ್ಪದಲ್ಲಿಯ ಬದಲಾವಣೆಗೆ ಸ್ಥಳೀಯ ಸಮುದ್ರ ಮಟ್ಟ ಏರಿಕೆಯು ಹೇಗೆ ಸಂವೇದನಾಶೀಲವಾಗಿದೆ ಎನ್ನುವುದನ್ನು ಅಳೆಯುತ್ತದೆ.
ಸಂವೇದನಾಶೀಲತೆಯನ್ನು ಗ್ರೇಡಿಯಂಟ್ ಮೈನಸ್ ಡಿಎಸ್/ಡಿಎಚ್ ಪ್ರಮಾಣ ದಲ್ಲಿ ಅಳೆಯಲಾಗುತ್ತಿದ್ದು, ಅದನ್ನು ಮೈನಸ್ 4ರಿಂದ ಮ್ಯೆನಸ್2, ಮೈನಸ್ 2ರಿಂದ 0, 0ದಿಂದ 2 ಮತ್ತು 2ರಿಂದ 4,ಹೀಗೆ ನಾಲ್ಕು ಬ್ಯಾಂಡ್‌ಗಳಲ್ಲಿ ವರ್ಗೀಕರಿಸಲಾಗಿದೆ.
ಮಂಗಳೂರಿನ ಮಟ್ಟಿಗೆ ಹೇಳುವುದಾದರೆ ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾಗಳ ಎಲ್ಲ ಪ್ರದೇಶಗಳಲ್ಲಿಯ ನೀರ್ಗಲ್ಲುಗಳ ದಪ್ಪದಲ್ಲಿ ಬದಲಾವಣೆಗೆ ಅತ್ಯಂತ ಹೆಚ್ಚಿನ ಸಂವೇದನಾಶೀಲತೆ ಹೊಂದಿದೆ. ಆದರೆ ಅಂಟಾರ್ಕ್ಟಿಕಾದ ಪಶ್ಚಿಮ ಮತ್ತು ಮೇರಿಲ್ಯಾಂಡ್‌ನ ದಕ್ಷಿಣ ಭಾಗಗಳಲ್ಲಿನ ಬದಲಾವಣೆಗಳಿಗೆ ಅದು ಹೆಚ್ಚು ಸಂವೇದನಾ ಶೀಲವಾಗಿದೆ.
ಗ್ರೀನ್‌ಲ್ಯಾಂಡ್‌ನ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ನೀರ್ಗಲ್ಲು ಕರಗುವಿಕೆ ನ್ಯೂಯಾರ್ಕ್‌ಗೆ ಅಪಾಯಕಾರಿಯಾಗಿದ್ದರೆ, ಇದೇ ಗ್ರೀನ್‌ಲ್ಯಾಂಡ್‌ನ ವಾಯುವ್ಯ ಭಾಗದಲ್ಲಿನ ಬದಲಾವಣೆಯು ಲಂಡನ್‌ನಲ್ಲಿ ಸಮುದ್ರ ಮಟ್ಟವನ್ನು ಹೆಚ್ಚಿಸುತ್ತದೆ.
ಅಧ್ಯಯನಕ್ಕೊಳಪಟ್ಟಿದ್ದ ದ.ಏಷ್ಯಾದ ಇತರ ನಗರಗಳ ಪೈಕಿ ಚಿತ್ತಗಾಂಗ್, ಕೊಲಂಬೊ ಮತ್ತು ಕರಾಚಿ ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾದ ಬದಲಾವಣೆಗಳಿಗೆ ಹೆಚ್ಚಿನ ಸಂವೇದನಾಶೀಲತೆಯನ್ನು ಹೊಂದಿವೆ. ಅಧ್ಯಯನ ವರದಿಯು ಸೈನ್ಸ್ ಅಡ್ವಾನ್ಸ್‌ಸ್‌ನಲ್ಲಿ ಪ್ರಕಟಗೊಂಡಿದೆ.