ತಳಮಟ್ಟ ತಲುಪಿದ ಆರ್ಥಿಕತೆ ಚೇತರಿಸುತ್ತಿದೆ: ಜೇಟ್ಲಿ

Update: 2017-11-16 16:12 GMT

ಸಿಂಗಾಪುರ, ನ.16: ಇತ್ತೀಚಿನ ರಚನಾತ್ಮಕ ಬದಲಾವಣೆಗಳಿಂದಾಗಿ ಭಾರತದ ಆರ್ಥಿಕತೆಯು ತಳಮಟ್ಟವನ್ನು ತಲುಪಿದೆ. ಆದರೆ ತಾತ್ಕಾಲಿಕ ಹಿನ್ನಡೆಯ ನಂತರ ಅದು ಚೇತರಿಸಿಕೊಳ್ಳುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದರು.

  ಇಲ್ಲಿನ ಮೋರ್ಗನ್ ಸ್ಟೇನ್ಲಿಯಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ “ಭಾರತ: ರಚನಾತ್ಮಕ ಸುಧಾರಣೆಗಳು ಮತ್ತು ಮುಂದಿರುವ ಬೆಳವಣಿಗೆಯ ಹಾದಿ” ವಿಷಯದಲ್ಲಿ ಹೂಡಿಕೆದಾರರನ್ನುದ್ದೇಶಿಸಿ ಮಾತನಾಡಿದ ಜೇಟ್ಲಿ ಭಾರತದಲ್ಲಿ ತೆಗೆದುಕೊಳ್ಳಲಾಗಿರುವ ಅಗಾಧ ಆರ್ಥಿಕ ಸುಧಾರಣೆಗಳ ಬಗ್ಗೆ ಮಾತನಾಡಿದರು.

ಆರ್ಥಿಕತೆಯಲ್ಲಿ ಉಂಟಾಗಿರುವ ತಾತ್ಕಾಲಿಕ ಹಿನ್ನಡೆಯು ಸರಕಾರ ತೆಗೆದುಕೊಂಡ ರಚನಾತ್ಮಕ ಬದಲಾವಣೆಯ ಪರಿಣಾಮವಾಗಿತ್ತು ಎಂದವರು ತಿಳಿಸಿದರು.

ಸಮ್ಮೇಳನದ ಭಾಗವಾಗಿ ಜೇಟ್ಲಿ ಮೋರ್ಗನ್ ಸ್ಟೇನ್ಲಿಯ ಹಿರಿಯ ವ್ಯವಸ್ಥಾಪನಾ ಮಂಡಳಿಯನ್ನು ಭೇಟಿ ಮಾಡಿದರು ಮತ್ತು ಹಿರಿಯ ಬಂಡವಾಳ ವ್ಯವಸ್ಥಾಪಕರು ಮತ್ತು ಮುಖ್ಯ ಆರ್ಥಿಕ ಸಂಸ್ಥೆಗಳ ಹೂಡಿಕೆದಾರರನ್ನುದ್ದೇಶಿಸಿ ಮಾತನಾಡಿದರು.

ಭಾರತವು ಕಳೆದ ಮೂರು ವರ್ಷಗಳಲ್ಲಿ ಶೇಕಡಾ 7-8ರ ವೇಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದೆ. ಹಾಗಾಗಿ ಭಾರತೀಯ ಆರ್ಥಿಕತೆಯ ವಿಸ್ತರಣಾ ಯೋಜನೆಗಾಗಿ ಕನಿಷ್ಟ ಮುಂದಿನ ಒಂದು ದಶಕದ ಕಾಲ ಹೆಚ್ಚಿನ ದರದಲ್ಲಿ ಬೆಳವಣಿಗೆಯನ್ನು ಕಾಣುವ ಅಗತ್ಯವಿದೆ ಎಂದು ಜೇಟ್ಲಿ ತಿಳಿಸಿದರು. ಜೊತೆಗೆ ಭಾರತದಲ್ಲಿ ಪ್ರಬಲ ಬ್ಯಾಂಕಿಂಗ್ ಕ್ಷೇತ್ರವನ್ನು ರಚಿಸುವ ಬಗ್ಗೆಯೂ ಹೂಡಿಕೆದಾರರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News