×
Ad

ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ

Update: 2017-11-16 22:28 IST

ಪುತ್ತೂರು, ನ. 16: ಪುತ್ತೂರು ಸರಕಾರಿ ಆಸ್ಪತ್ರೆಯ ಪಕ್ಕದ ನಿವೇಶನದಲ್ಲಿರುವ ಶತಮಾನಗಳಷ್ಟು ಹಳೆಯದಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಅಥವಾ ಸೂಕ್ತ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು 2 ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಪುತ್ತೂರು ಸಹಾಯಕ ಕಮೀಷನರ್‌ಗೆ ಸೂಚಿಸಿದರು.

ಗುರುವಾರ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ರೋಗಿಗಳ ವಿಭಾಗಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ಉಪನೋಂದಣಿ ಕಚೇರಿಯು ಸ್ಥಳಾಂತರವಾದರೆ ಈ ನಿವೇಶನದಲ್ಲಿ ಸರಕಾರಿ ಆಸ್ಪತ್ರೆಯ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಲು ಸಾಧ್ಯ. ಆದರೆ ಜಿಲ್ಲಾಧಿಕಾರಿಗಳು ಆದೇಶಿಸಿದರೂ, ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಅಥವಾ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತಿಲ್ಲ ಎಂದು ಗಮನ ಸೆಳೆದರು.

ಈ ವಿಚಾರದ ಬಗ್ಗೆ ಪುತ್ತೂರು ಸಹಾಯಕ ಕಮೀಷನರ್ ಡಾ. ರಘುನಂದನ್ ಮೂರ್ತಿಯವರಿಗೆ ಸೂಚನೆ ನೀಡಿದ ಲೋಕಾಯುಕ್ತರು ಈ ಕುರಿತು ಕ್ರಮ ಕೈಗೊಳ್ಳಿ. ಮಾತ್ರವಲ್ಲದೆ ಜಿಲ್ಲಾ ನೋಂದಣಿ ಅಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರು ನೀಡಿದ ಸೂಚನೆಯ ಕುರಿತು ತಿಳಿಸಬೇಕು. ಈ ಕುರಿತು ಸ್ಪಂದನ ವ್ಯಕ್ತವಾಗದಿದ್ದರೆ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಉಪನೋಂದಣಿ ಕಚೇರಿಯನ್ನು ಇಲ್ಲಿಂದ ಸ್ಥಳಾಂತರಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬಾರದು ಎಂದು ಸೂಚಿಸಿದರು.

ಸಿಬ್ಬಂದಿಗೆ ಸೂಚನೆ
ಪುತ್ತೂರು ಸರಕಾರಿ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ರೋಗಿಗಳ ಸಹಾಯಕರು ಸೇರಿದಂತೆ ಯಾರೂ ಚಪ್ಪಲಿ ಧರಿಸಿ ಒಳಗೆ ಹೋಗಬಾರದು. ಈ ಕುರಿತು ಪ್ರತೀ ವಾರ್ಡ್‌ಗಳ ಬಾಗಿಲ ಬಳಿ ಫಲಕಗಳನ್ನು ಕೂಡಲೇ ಅಳವಡಿಸಬೇಕು. ಆಸ್ಪತ್ರೆಯ ಶುಚಿತ್ವಕ್ಕೆ ಆಧ್ಯತೆ ನೀಡಬೇಕು. ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಸೂಚಿಸಿದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಹಿಂಭಾಗದ ಖಾಲಿ ನಿವೇಶನದಲ್ಲಿ ಹೂದೋಟ ಮತ್ತು ಆಸ್ಪತ್ರೆಯ ರೋಗಿಗಳ ಸಹಾಯಕರಿಗೆ ಸಂಜೆ ಹೊತ್ತು ವಿರಮಿಸಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ ಮಾಡುವಂತೆ ಲೋಕಾಯುಕ್ತರು ಸಲಹೆ ಮಾಡಿದರು.

ಈ ಸಂದರ್ಭ ಲೋಕಾಯುಕ್ತ ಜಿಲ್ಲಾ ಎಸ್ಪಿ ರಶ್ಮಿ, ಪುತ್ತೂರು ಸರಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಆಶಾಜ್ಯೋತಿ ಹಾಗೂ ಇತರ ವೈದ್ಯರು ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News