ಸದಾನಂದ ಶೆಟ್ಟಿಯವರಿಗೆ ಎಂಎಂಎ ಅತ್ಯುತ್ತಮ ವ್ಯವಸ್ಥಾಪಕ- 2017 ಪ್ರಶಸ್ತಿ
ಮಂಗಳೂರು, ನ.16: ಮಂಗಳೂರು ಮ್ಯಾನೇಜ್‌ಮೆಂಟ್‌ಅಸೋಸಿಯೇಶನ್ (ಎಂಎಂಎ) ಆಡಳಿತ ಮಂಡಳಿಯು 2017 ರ ಎಂಎಂಎ- ಕೆವಿಕೆ ಶ್ರೇಷ್ಠ ಆಡಳಿತ ನಿರ್ವಾಹಕ (ಅತ್ಯುತ್ತಮ ವ್ಯವಸ್ಥಾಪಕ) ಪ್ರಶಸ್ತಿಗೆ ಮಂಗಳೂರು ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರನ್ನು ಆಯ್ಕೆ ಮಾಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಂಎಂಎ ಅಧ್ಯಕ್ಷ ಮಾರ್ಸೆಲ್ ಮೊಂತೆರೊ ಈ ವಿಷಯವನ್ನು ಪ್ರಕಟಿಸಿದರು.
ಸ್ವಪ್ರಯತ್ನದಿಂದ ಯಶಸ್ವಿ ಉದ್ಯಮಿಯಾಗಿ ರೂಪುಗೊಂಡಿರುವ ಸದಾನಂದ ಶೆಟ್ಟಿಯವರು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ಕ್ರೀಡೆ ಹಾಗೂ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಕರ್ನಾಟಕ ರಾಜ್ಯ ಪವರ್‌ಲಿಫ್ಟಿಂಗ್ ಫೆಡರೇಶನ್ ಅಧ್ಯಕ್ಷರಾಗಿ, ರಾಜ್ಯ ಶಟಲ್‌ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಮತ್ತು ಕಬಡ್ಡಿ ಅಸೋಸಿಯೇಶನ್‌ಗಳ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮರ್ಥವಾಗಿ ಮುನ್ನಡೆಸಿ ಯಶಸ್ಸು ಕಂಡಿದ್ದಾರೆ. 2002 ರಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದ ನಾಯಕತ್ವ, 1988 ರಲ್ಲಿ ಬ್ಯಾಂಕಾಂಗ್‌ನಲ್ಲಿ ಜರುಗಿದ ಏಶಿಯನ್‌ಗೇಮ್ಸ್‌ನಲ್ಲಿ ತಾಂತ್ರಿಕ ವೀಕ್ಷಕರಾಗಿ ಭಾರತವನ್ನು ಪ್ರತಿನಿಧಿಸಿದ್ದರು ಎಂದವರು ವಿವರಿಸಿದರು.
ನ.23 ರಂದು ಸಾಯಂಕಾಲ 6 ಗಂಟೆಗೆ ನಗರದ ದಿ ಓಶಿಯನ್‌ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಮಂಗಳೂರು ವಿ.ವಿ. ಕುಲಪತಿ ಡಾ.ಕೆ.ಬೈರಪ್ಪ ಮತ್ತು ಮಾಜಿ ಕುಲಪತಿ ಡಾ.ಬಿ.ಎ.ವಿವೇಕ್ ರೈ ಮುಖ್ಯ ಅತಿಥಿಗಳಾಗಿರುವರು ಎಂದರು.
ಎಂಎಂಎ ಉಪಾಧ್ಯಕ್ಷ ಕೆ.ಜೈರಾಜ್ ಬಿ.ರೈ, ಕಾರ್ಯದರ್ಶಿಡಾನ್‌ಪ್ರಕಾಶ್, ಕೋಶಾಧಿಕಾರಿ ಜೆ.ವಿಶ್ವನಾಥ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಡಾ.ದೇವರಾಜ್‌ಕೆ ಉಪಸ್ಥಿತರಿದ್ದರು.