×
Ad

ವಾರದೊಳಗೆ ಜಮೀನಿನ ಬೆಳೆ ವಿವರ ನಮೂದಿಸಿ: ಜಿಲ್ಲಾಧಿಕಾರಿ ಸೆಂಥಿಲ್

Update: 2017-11-16 22:44 IST

ಮಂಗಳೂರು, ನ.16: ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ನಮೂದಿಸಲು ರಾಜ್ಯ ಸರಕಾರವು ಆ್ಯಪ್ ಜಾರಿಗೊಳಿಸಿದ್ದು, ರೈತರು ತಮ್ಮ ಮೊಬೈಲ್‌ನಲ್ಲಿ ಱಕರ್ನಾಟಕ ಕಾರ್ಮರ್ಸ್‌ ಕ್ರಾಪ್ ಸರ್ವೆೞಆ್ಯಪನ್ನು ಡೌನ್‌ಲೋಡ್ ಮಾಡಿಕೊಂಡು ಆರ್‌ಟಿಸಿಯಲ್ಲಿ ಬೆಳೆಯ ವಿವರಗಳನ್ನು ತಾವೇ ನೋಂದಣಿ ಮಾಡಿಸಿಕೊಳ್ಳಬಹುದು. ಈಗಾಗಲೇ ಜಿಲ್ಲೆಯಲ್ಲಿ ಶೇ.60ರಷ್ಟು ನೋಂದಣಿ ಕಾರ್ಯ ನಡೆದಿದ್ದು, ಉಳಿದವರು ವಾರದೊಳಗೆ ನೋಂದಣಿ ಮಾಡಿಸಿಕೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಬೆಳೆ ಸಮೀಕ್ಷೆ ಆ್ಯಪ್ ಕುರಿತು ಜಿಲ್ಲೆಯ ರೈತ ಮುಖಂಡರಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಬೆಳೆ ನಷ್ಟ, ಸರಕಾರದ ಸೌಲಭ್ಯ ಹಾಗೂ ಸಾಲ ಸೌಲಭ್ಯ ಪಡೆಯಲು ಆರ್‌ಟಿಸಿಯಲ್ಲಿ ಬೆಳೆ ನಮೂದು ಮಾಡುವ ಅಗತ್ಯವಿರುತ್ತದೆ. ಪ್ರಸ್ತುತ ಆ ಕಾರ್ಯವನ್ನು ಗ್ರಾಮಕರಣಿಕರು ಮಾಡುತ್ತಿದ್ದರು. ಮುಂದೆ ಅದನ್ನು ರೈತರೇ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಹೆಕ್ಟೇರ್‌ನಷ್ಟು ಭೂಮಿಗಳಿದ್ದು, ಈಗಾಗಲೇ 5 ಲಕ್ಷ ಭೂಮಿಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿವೆ. ರೈತರು ತಮ್ಮ ಆ್ಯಂಡ್ರೋಯ್ಡೋ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ (ಕರ್ನಾಟಕ ಕಾರ್ಮರ್ಸ್‌ ಕ್ರಾಪ್ ಸರ್ವೆ) ಡೌನ್‌ಲೋಡ್ ಮಾಡಿ ತಾವು ಬೆಳೆಯುತ್ತಿರುವ ಬೆಳೆಗಳ (ಭತ್ತ, ಅಡಿಕೆ ಇತ್ಯಾದಿ)ಪೋಟೊ ತೆಗೆದು ತಮ್ಮ ಜಮೀನಿನ 500 ಮೀ.ಒಳಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಆ್ಯಪ್‌ಗೆ ಆಧಾರ್ ಸಂಖ್ಯೆಯನ್ನು ಕೂಡ ನಮೂದಿಸಬೇಕಾಗುತ್ತದೆ. ಒಂದು ಮೊಬೈಲ್‌ನಲ್ಲಿ ಒಂದಕ್ಕಿಂತ ಹೆಚ್ಚಿನ ರೈತರ ವಿವರವನ್ನು ಕೂಡ ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನುಡಿದರು.

ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಲೋಡ್ ಮಾಡಬೇಕು. ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ತಕ್ಷಣ ಆ ಗ್ರಾಮದ ಎಲ್ಲ ಸರ್ವೆ ನಂಬರ್‌ಗಳ ಮಾಹಿತಿಯೂ ಲಭ್ಯವಾಗುತ್ತದೆ. ಅದರಲ್ಲಿ ಕೃಷಿ ಭೂಮಿಯ ಸರ್ವೆ ನಂಬರ್ ಗುರುತಿಸಿ ಬೆಳೆ ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದು. ಆರ್‌ಟಿಸಿಯಲ್ಲಿ ಹಲವರ ಹೆಸರಿದ್ದರೂ ಒಬ್ಬರ ಆಧಾರ್ ಸಂಖ್ಯೆ ನಮೂದಿಸಿ ಮಾಹಿತಿ ಅಪ್‌ಲೋಡ್ ಮಾಡಿದರೆ ಸಾಕು. ಆಧಾರ್ ಸಂಖ್ಯೆ ಉಲ್ಲೇಖಿಸಿದರೆ ಬೆಳೆ ನಷ್ಟವಾದಾಗ ಪರಿಹಾರ ಪಡೆಯುವ ಸಂದರ್ಭದಲ್ಲಿ ನೇರವಾಗಿ ರೈತರ ಖಾತೆಗೆ ಪರಿಹಾರ ಸಂದಾಯ ಮಾಡಲು ಇದರಿಂದ ಸುಲಭವಾಗಲಿದೆ ಎಂದು ಸೆಂಥಿಲ್ ಹೇಳಿದರು.

ಆ್ಯಪ್‌ನಲ್ಲಿ ಪ್ರತಿಯೊಂದು ಬೆಳೆಗೂ ಕೋಡ್‌ಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೆಳೆಯುವ ಬೆಳೆಗಳ ಕೋಡ್ ಗಮನಿಸಿಕೊಳ್ಳಬೇಕು. ತಮ್ಮ ಕೃಷಿ ಜಮೀನಿನ ಫೊಟೋವನ್ನು 500 ಮೀಟರ್ ಅಂತರದಲ್ಲಿ ತೆಗೆದ ಬಳಿಕ ಅಪ್‌ಲೋಡ್ ಮಾಡಬಹುದು. ಫೊಟೋ ತೆಗೆಯುವಾಗ ಜಿಪಿಎಸ್ ಆನ್ ಮಾಡಿರಬೇಕು. ಅದಕ್ಕೆ ಇಂಟರ್‌ನೆಟ್‌ನ ಅಗತ್ಯವಿಲ್ಲ. ಇಂಟರ್‌ನೆಟ್ ಲಭ್ಯವಿರುವ ಕಡೆಗಳಲ್ಲಿ ಮಾಹಿತಿ ಅಪ್‌ಲೋಡ್ ತನ್ನಷ್ಟಕ್ಕೆ ತಾನೇ ಆಗಲಿದೆ ಎಂದು ಸೆಂಥಿಲ್ ಮಾಹಿತಿ ನೀಡಿದರು.

ಒಂದೇ ಆರ್‌ಟಿಸಿಯಲ್ಲಿ ಮಿಶ್ರಬೆಳೆಗಳನ್ನು ಬೆಳೆಯುತ್ತಿದ್ದರೂ ಮಾಹಿತಿ ಅಪ್‌ಲೋಡ್ ಮಾಡಬಹುದು. ಜಿಲ್ಲೆಯಲ್ಲಿ ಮಾಹಿತಿ ಅಪ್‌ಲೋಡ್ ಮಾಡುವ ಸಂದರ್ಭ ಎದುರಾಗುವ ತೊಂದರೆಗಳನ್ನು ಗಮನಕ್ಕೆ ತಂದರೆ ಅದನ್ನು ಸರಿಪಡಿಸುವ ಅವಕಾಶವೂ ಇದೆ. ಕುಮ್ಕಿ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಮಾಹಿತಿ ಅಪ್‌ಲೋಡ್ ಮಾಡುವುದು ಸಾಧ್ಯವಿಲ್ಲ. ಆದರೆ ಆ್ಯಪ್‌ನಲ್ಲಿ ದೊರೆಯುವ ಮಾಹಿತಿಯಲ್ಲಿ ಜಾಗದ ಸ್ವರೂಪ (ನಂಜ, ಪಂಜ, ಕುಮ್ಕಿ)ವನ್ನು ಬದಲಾಯಿಸಿಲ್ಲ. ಈಗಾಗಲೇ ಅಪ್‌ಲೋಡ್ ಮಾಡಿದ ಮಾಹಿತಿಯನ್ನು ಇನ್ನೂ ಭೂಮಿ ಸರ್ವರ್‌ಗೆ ಲಿಂಕ್ ಮಾಡಿಲ್ಲ. ಶೀಘ್ರದಲ್ಲಿ ಆ ಕೆಲಸ ನಡೆಯಲಿದೆ ಎಂದು ಸೆಂಥಿಲ್ ನುಡಿದರು.

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ ರಚನೆ, ಅಡಿಕೆ ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ, ಕೃಷಿ ಸಿಂಚಯಿ ಯೋಜನೆಯ ಸಮರ್ಪಕ ಜಾರಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಬೇಕು. ಬೆಳೆಗಳಿಗೆ ತೊಂದರೆ ನೀಡುತ್ತಿರುವ ಮಂಗ, ನವಿಲುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು, ರೈತರ ಗುಂಪುಗಳಿಗೆ ಜಾಮೀನು ರಹಿತವಾಗಿ ಸಾಲ ಯೋಜನೆ, ರೈತಾಪಿ ವರ್ಗಕ್ಕೆ ನೆರವಾಗಲು ಆವರ್ತ ನಿಧಿ ಸ್ಥಾಪನೆ, ಆರ್‌ಟಿಸಿ ಪತ್ರ ಕೊರತೆ ಆಗದಂತೆ ಕ್ರಮ, ಪ್ರತೀ ಗ್ರಾಮಕ್ಕೆ ಒಬ್ಬ ಗ್ರಾಮ ಲೆಕ್ಕಾಧಿಕಾರಿಯ ನೇಮಕ ಸಹಿತ ವಿವಿಧ ವಿಚಾರಗಳ ಬಗ್ಗೆ ರೈತ ಮುಖಂಡರು ಜಿಲ್ಲಾಧಿಕಾರಿತಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರೈತರ ಎಲ್ಲಾ ವಿಚಾರಗಳ ಬಗ್ಗೆ ನಾನು ಅತ್ಯಂತ ಹತ್ತಿರದಿಂದ ಬಲ್ಲೆ. ಹಾಗಾಗಿ ತಿಂಗಳಿಗೊಮ್ಮೆ ರೈತರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News