×
Ad

ಬೀಡಿ ಕಾರ್ಮಿಕರ ಬಗ್ಗೆ ಕಾರ್ಮಿಕ ಸಚಿವರಿಂದ ತಪ್ಪುಮಾಹಿತಿ: ಎಐಟಿಯುಸಿ ಖಂಡನೆ

Update: 2017-11-16 22:46 IST

ಮಂಗಳೂರು, ನ.16: ರಾಜ್ಯದಲ್ಲಿ ಬೀಡಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿಲ್ಲ ಹಾಗೂ ಬೀಡಿ ಕಾರ್ಮಿಕರಿಗೆ ಸವಲತ್ತುಗಳು ಸಿಗುತ್ತಿಲ್ಲ ಎಂಬ ಬಗ್ಗೆ ಇಲಾಖೆಯಲ್ಲಿ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ವಿಧಾನ ಪರಿಷತ್‌ನಲ್ಲಿ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜರ ಪ್ರಶ್ನೆಗೆ ಉತ್ತರಿಸುವ ಮೂಲಕ ಬೀಡಿ ಕಾರ್ಮಿಕರ ಬಗ್ಗೆ ತಪ್ಪುಮಾಹಿತಿ ನೀಡಿದ್ದಾರೆ. ಸಚಿವರ ಈ ಹೇಳಿಕೆ ಬೇಜವಾಬ್ಧಾರಿಯಿಂದ ಕೂಡಿದೆ ಎಂದು ಎಐಟಿಯುಸಿ ನೇತೃತ್ವದ ಎಸ್.ಕೆ. ಬೀಡಿ ವರ್ಕರ್ಸ್‌ ಫೆಡರೇಶನ್ ತಿಳಿಸಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪುಕೈಗಾರಿಕಾ ವಿರೋಧಿ ನೀತಿಗಳಿಂದ ಬೀಡಿ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕರ್ನಾಟಕದ ಅಭಿವೃದ್ಧಿ ದರಕ್ಕೆ ಹೋಲಿಸಿದರೆ ರಾಜ್ಯದ ಬೀಡಿ ಕಾರ್ಮಿಕರಿಗೆ ಘೋಷಿಸಿರುವ ಕನಿಷ್ಠಕೂಲಿ ಅತ್ಯಲ್ಪವಾಗಿದೆ. ಈ ಕೂಲಿಯನ್ನು ಕೂಡಾ ಮಾಲಕರು ಸೂಕ್ತ ಸಮಯದಲ್ಲಿ ಜಾರಿ ಮಾಡುತ್ತಿಲ್ಲ. 2015ನೆ ಸಾಲಿಗೆ ಸರಕಾರ ಪ್ರಕಟಿಸಿದ 12.75 ರೂ. ತುಟ್ಟಿಭತ್ತೆಯನ್ನು ಮಾಲಕರ ಮನವಿ ಮೇರೆಗೆ ಪಾವತಿಸುವುದು ಬೇಡವೆಂದು ಸರಕಾರವೇ ಮಾಲಕರಿಗೆ ವಿನಾಯಿತಿ ನೀಡಿರುವುದು ಕಾರ್ಮಿಕ ಸಚಿವರಿಗೆ ತಿಳಿದಿಲ್ಲವೇ? ತಾನು ಪ್ರಕಟಿಸಿದ ತುಟ್ಟಿಭತ್ತೆಯನ್ನು ಕಾರ್ಮಿಕರಿಗೆ ಪಾವತಿಸುವುದು ಬೇಡವೆಂದು ಪ್ರಕಟಿತ ಅಧಿಸೂಚನೆಯನ್ನು ಹಿಂತೆಗೆದು ಮರು ಅಧಿಸೂಚನೆ ಹೊರಡಿಸಿರುವ ವಿಚಾರ ಕಾರ್ಮಿಕ ಮಂತ್ರಿಗೆ ತಿಳಿದಿಲ್ಲವೆಂದರೆ ಏನರ್ಥ? ಎಂದು ಎಐಟಿಯುಸಿ ಪ್ರಶ್ನಿಸಿದೆ.

ಎಐಟಿಯುಸಿ ನೇತೃತ್ವದ ಬೀಡಿ ಕಾರ್ಮಿಕರ ಯೂನಿಯನ್‌ಗಳು ತನ್ನ ಪತ್ರ ಚಳವಳಿ ಹೋರಾಟದ ಅಂಗವಾಗಿ 2015ರ ತುಟ್ಟಿಭತ್ತೆ ವಿವಾದವನ್ನು ಬಗೆಹರಿಸಲು ಸರಕಾರ ಮುತುವರ್ಜಿವಹಿಸಬೇಕು ಎಂದು ವಿನಂತಿಸಿ 25 ಸಾವಿರಕ್ಕಿಂತಲೂ ಅಧಿಕ ಪತ್ರಗಳನ್ನು ಕಾರ್ಮಿಕರಲ್ಲಿ ಬರೆಯಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್‌ರ ಹೆಸರಿಗೆ ನೇರವಾಗಿ ಅಂಚೆ ಮೂಲಕ ಕಳುಹಿಸಲಾಗಿದೆ. ಹೀಗಿದ್ದರೂ ಕಾರ್ಮಿಕ ಸಚಿವರು ಸತ್ಯವನ್ನು ಮರೆಮಾಚಿರುವುದು ಅವರ ಸ್ಥಾನಕ್ಕೆ ಎಸಗಿರುವ ಅಪಚಾರವಾಗಿದೆ ಎಂದು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಬೀಡಿ ಗುತ್ತಿಗೆದಾರರು ಕಮಿಷನ್ ಹೆಚ್ಚಳಕ್ಕಾಗಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಉಪಾಯುಕ್ತರು ಸಂಧಾನ ಮಾತುಕತೆ ನಡೆಸುತ್ತಿದ್ದಾರೆ. ಒಂದು ವಾರದಿಂದ ಕಾರ್ಮಿಕರು ಕೆಲಸಲ್ಲದೆ ಕಂಗಲಾಗಿದ್ದಾರೆ. ಈ ವಿಚಾರವೂ ಸಚಿವರಿಗೆ ತಿಳಿದಿಲ್ಲವೇ?ಎಂದು ಎಐಟಿಯುಸಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News