×
Ad

ನ.18ರಿಂದ ವಿಮಾ ನೌಕರರ ಮಹಾ ಸಮ್ಮೇಳನ

Update: 2017-11-16 23:32 IST

ಉಡುಪಿ, ನ.16: ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 11ನೇ ಮಹಾಸಮ್ಮೇಳನ ವಿಮಾ ನೌಕರರ ಸಂಘ ಉಡುಪಿ ವಿಭಾಗದ ಆಶ್ರಯದಲ್ಲಿ ನ.18ರಿಂದ 21ರವರೆಗೆ ಉಡುಪಿ ಮಿಷನ್ ಕಾಂಪೌಂಡ್‌ನ ಬಾಸೆಲ್ ಮಿಷನರೀಸ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.

ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಮ್ಮೇಳನದ ಸಂಚಾಲಕ ಯು.ಗುರುದತ್ ಈ ವಿಷಯ ತಿಳಿಸಿದರು. ದಕ್ಷಿಣ ಮಧ್ಯ ವಲಯವು ಭಾರತೀಯ ಜೀವವಿಮಾ ನಿಗಮದ ಎಂಟು ವಲಯ ಕಚೇರಿಗಳಲ್ಲಿ ಒಂದಾಗಿದ್ದು, ಹೈದರಾಬಾದ್‌ನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ಮೂರು ದಿನಗಳ ಸಮ್ಮೇಳನದಲ್ಲಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಿಗೆ ಸೇರಿದ 17 ವಿಭಾಗಗಳಿಂದ 1000ಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ ವೀಕ್ಷಕರು ಭಾಗವಹಿಸಲಿದ್ದಾರೆ ಎಂದರು.

1992ರಲ್ಲಿ ಮೊದಲ ಸಮ್ಮೇಳನ ಉಡುಪಿಯಲ್ಲಿ ನಡೆದಿದ್ದು, ಈಗ 25 ವರ್ಷಗಳ ಬಳಿಕ ಎರಡನೇ ಬಾರಿಗೆ 11ನೇ ಸಮ್ಮೇಳನದ ಆತಿಥ್ಯವನ್ನು ವಹಿಸಲಾಗಿದೆ ಎಂದು ಗುರುದತ್ ಹೇಳಿದರು. ಭಾರತೀಯ ಜನಪರ ಭಾಷಾ ಸರ್ವೇಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಗಣೇಶ್ ಎನಂ. ದೇವಿ ಅವರು ನ.18ರ ಸಂಜೆ 4:00ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಇದಕ್ಕೆ ಮೊದಲು ಅಪರಾಹ್ನ 3:00ಕ್ಕೆ ವಿಮಾ ನೌಕರರು ಹಾಗೂ ಇತರ ಸಂಘಟನೆಗಳ ಸದಸ್ಯರು ಅಜ್ಜರಕಾಡಿನ ಎಲ್ಲೈಸಿ ಕಚೇರಿಯಂದ ಬೃಹತ್ ಮೆರವಣಿಗೆ ನಡೆಸಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ಅಮಾನುಲ್ಲಾ ಖಾನ್, ಉಪಾಧ್ಯಕ್ಷ ಕೆ.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ವಿ.ರಮೇಶ್, ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕ್ಲೆಮೆಂಟ್ ಕ್ಸೇವಿಯರ್ ದಾಸ್ ಭಾಗವಹಿಸಲಿದ್ದಾರೆ. ಅಧ್ಯಕ್ಷ ಕೆ.ವೇಣುಗೋಪಾಲ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ನಾಲ್ಕು ದಿನಗಳ ಸಮ್ಮೇಳನದಲ್ಲಿ ವಿಮಾ ನೌಕರರಿಗೆ ಸಂಬಂಧಿಸಿದ ಹಾಗೂ ಎಲ್ಲೈಸಿಯನ್ನು ಸಾರ್ವಜನಿಕ ರಂಗದ ಉದ್ಯಮವಾಗಿ ಉಳಿಸಿಕೊಳ್ಳುವ ಕುರಿತು ಚರ್ಚಿಸಲಾಗುವುದು ಎಂದು ಗುರುದತ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ವಿಮಾ ನೌಕರರ ಸಂಘದ ಪ್ರಭಾಕರ ಬಿ.ಕುಂದರ್, ಕೆ.ವಿಶ್ವನಾಥ ರೈ, ಅದಮಾರು ಶ್ರೀಪತಿ ತಂತ್ರಿ ಹಾಗೂ ಶಿವಪ್ರಸಾದ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News