×
Ad

ನ.19ಕ್ಕೆ ಸಂಘದಿಂದ ಮಟ್ಟು ಗುಳ್ಳದ ಲಾಂಛನ ಬಿಡುಗಡೆ

Update: 2017-11-16 23:37 IST

 ಉಡುಪಿ, ನ.16: ಕಟಪಾಡಿ ಸಮೀಪದ ಮಟ್ಟು ಗ್ರಾಮ ಪರಿಸರದಲ್ಲಿ ಮಾತ್ರ ಬೆಳೆಯುವ ಬದನೆಕಾಯಿಯ ಪ್ರಬೇಧಗಳಲ್ಲಿ ಒಂದಾದ, ಜಿಯಾ ಗ್ರಾಫಿಕಲ್ ಇಂಡಿಕೇಷನ್ (ಜಿಐ) ಮಾನ್ಯತೆ ಪಡೆದಿರುವ ‘ಮಟ್ಟು ಗುಳ್ಳ’ಕ್ಕೆ ಕಟಪಾಡಿ ಮಟ್ಟುವಿನ ಮಟ್ಟು ಗುಳ್ಳ ಬೆಳೆಗಾರರ ಸಂಘ ‘ಮಟ್ಟುಗುಳ್ಳ ಲಾಂಛನ’ ವನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

ನ.19ರ  ಬೆಳಗ್ಗೆ 10:30ಕ್ಕೆ ಮಟ್ಟು ಅಣೆಕಟ್ಟು ಬಳಿ ನಡೆಯುವ ಸಮಾರಂಭದಲ್ಲಿ ಮಟ್ಟು ಗುಳ್ಳ ಬೆಳೆಗಾರರ ಸಂಘ, ಮಣಿಪಾಲ ವಿವಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ (ಎಸ್‌ಒಎಂ) ಸಹಕಾರ ದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ದಯಾನಂದ ವಿ. ಬಂಗೇರ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಟ್ಟು ಗುಳ್ಳಕ್ಕೆ ಜಿಐ ಮಾನ್ಯತೆ ದೊರಕಿರುವ ಹಿನ್ನೆಲೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ಮಟ್ಟು ಗುಳ್ಳ ಬೆಳೆಗಾರರು ಇದೀಗ ವ್ಯವಸ್ಥಿತ ಮಾರುಕಟ್ಟೆಯ ಮೂಲಕ ಅದನ್ನು ವಿಸ್ತರಿಸಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ಈಗ ಲಾಂಛನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದವರು ಹೇಳಿದ್ದಾರೆ.

ಒಟ್ಟು 160 ಬೆಳೆಗಾರರು ಸುಮಾರು 200 ಎಕರೆ ಪ್ರದೇಶದಲ್ಲಿ ಈ ಮಟ್ಟುಗುಳ್ಳವನ್ನು ಬೆಳೆಯುತಿದ್ದು, ಸಂಘದಲ್ಲೇ ಇದರ ದಿನದ ದರ ನಿಗದಿ ಯಾಗಲಿದೆ. ಸಂಘದ ಮೂಲಕವೇ ಗುಳ್ಳ, ಲಾಂಛನದೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದರಿಂದ ಮಟ್ಟುಗುಳ್ಳದ ಲಾಭ ಮಧ್ಯವರ್ತಿಗಳ ಪಾಲಾಗದೇ ನೇರವಾಗಿ ರೈತರಿಗೆ ಸಿಗಲಿದೆ ಎಂದು ಬಂಗೇರ ವಿವರಿಸಿದರು.

ಮಣಿಪಾಲದ ಎಸ್‌ಒಎಂ, 2016ರಲ್ಲಿ ಮಟ್ಟು ಗುಳ್ಳ ಬೆಳೆಗಾರರ ಸಂಘದ ಹೆಸರನ್ನು ರೈತ ಉತ್ಪಾದಕರ ಸಂಘಟನೆ (ಎಫ್‌ಪಿಒ)ಯಡಿ ನಬಾರ್ಡ್‌ಗೆ ಶಿಫಾರಸ್ಸು ಮಾಡಿತ್ತು. ಇದರಿಂದ ಮಟ್ಟು ಗುಳ್ಳದ ಮಾರುಕಟ್ಟೆ ವ್ಯವಸ್ಥಿತವಾಗಿ ನಡೆಯಲು ಹಾಗೂ ವಿಸ್ತರಿಸಲು ಸಾಧ್ಯವಾಯಿತು ಎಂದು ನಬಾರ್ಡ್ ಪ್ರಾಜೆಕ್ಟ್‌ನ ಸಂಯೋಜಕರಾಗಿರುವ ಎಸ್‌ಒಎಂನ ಪ್ರಾಧ್ಯಾಪಕ ಡಾ.ಹರೀಶ್ ಜೋಷಿ ತಿಳಿಸಿದರು.

ಇದರಿಂದ ಸಂಘದ ಹೊರಗೆ ಮಟ್ಟು ಗುಳ್ಳದ ಮಾರಾಟವನ್ನು ನಿಯಂತ್ರಿಸಲಾ ಯಿತು. ಬೆಳೆಗಾರರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಸಂಘದ ಮೂಲಕವೇ ಮಟ್ಟುಗುಳ್ಳವನ್ನು ಮಾರುವಂತಾಯಿತು. ವೈಜ್ಞಾನಿಕ ರೀತಿಯಲ್ಲಿ ಇದನ್ನು ಬೆಳೆದು, ಗುಣಮಟ್ಟದಂತೆ ವರ್ಗೀಕರಿಸಿ, ಬೇಡಿಕೆಗನುಗುಣವಾಗಿ, ದರವನ್ನು ಮೊದಲೇ ನಿಗದಿ ಪಡಿಸಿ ಮಾರುಕಟ್ಟೆಗೆ ಬಿಡಲು ಸಾಧ್ಯವಾಗಿದೆ. ಇದರಿಂದ ರೈತರು ಮೊದಲಿಗಿಂತ ಶೇ.30ರಿಂದ 40ರಷ್ಟು ಹೆಚ್ಚು ಲಾಭ ಪಡೆಯುತಿದ್ದಾರೆ ಎಂದು ಡಾ.ಹರೀಶ್ ವಿವರಿಸಿದರು.

ಇನ್ನು ಮುಂದೆ ಮಟ್ಟು ಗುಳ್ಳವನ್ನು ಲಾಂಛನದೊಂದಿಗೆ ಮಾರಲಾಗುತ್ತದೆ. ಇದರಿಂದ ಮಟ್ಟು ಗುಳ್ಳದ ಹೆಸರಿನಲ್ಲಿ ಬೇರೆ ಬದನೆಯನ್ನು ಮಾರಲು ಸಾಧ್ಯವಾಗುವುದಿಲ್ಲ. ಈಗ ಜಿಲ್ಲೆಯಲ್ಲಿ ಎಲ್ಲಾ ಬದನೆ ಪ್ರಬೇಧಗಳನ್ನು ಮಟ್ಟು ಗುಳ್ಳದ ಹೆಸರಿನಲ್ಲೇ ಮಾರುತಿದ್ದು, ಇದಕ್ಕೆ ತೆರೆ ಬೀಳಲಿದೆ. ಇನ್ನು ಮಟ್ಟು ಪರಿಸರದಲ್ಲಿ ಬೆಳೆಯುವ ಸಂಘದ ಮೂಲಕ ಮಾರುಕಟ್ಟೆಗೆ ಬರುವ ವಿಶಿಷ್ಟ ಗುಣವೈಶಿಷ್ಟದ ಬದನೆ ಮಾತ್ರ ಮಟ್ಟು ಗುಳ್ಳ ಎಂದು ಕರೆಸಿಕೊಳ್ಳಲಿದೆ.

ಸಂಘ ಈಗ ಉಡುಪಿಯಲ್ಲದೇ, ಮಂಗಳೂರು, ಕಾರ್ಕಳ, ಕುಂದಾಪುರ ಗಳಲ್ಲಿ ಮಟ್ಟುಗುಳ್ಳ ಮಾರಾಟದ ವ್ಯವಸ್ಥೆ ಮಾಡಿದೆ. ಮುಂದೆ ಅದನ್ನು ಮುಂಬಯಿ ಹಾಗೂ ಇತರ ಕಡೆಗಳಿಗೂ ಕಳುಹಿಸುವ ಗುರಿ ಇದೆ. ಅಲ್ಲದೇ ಉಡುಪಿಯಲ್ಲಿ ಮಾರಾಟಕ್ಕೆ ಮೊಬೈಲ್ ಯುನಿಟ್‌ನ್ನು ಬಳಸುವ ಯೋಜನೆ ಯೂ ಇದೆ ಎಂದು ದಯಾನಂದ ಬಂಗೇರ ತಿಳಿಸಿದರು.

ಕಾರ್ಯಕ್ರಮದಲ್ಲಿ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಲಾಂಛನ ಬಿಡುಗಡೆಗೊಳಿಸುವರು. ಕಾಪು ಶಾಸಕ ವಿನಯಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸುವರು. ದಯಾನಂದ ಬಂಗೇರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೋಟೆ ಗ್ರಾಪಂ ಅಧ್ಯಕ್ಷೆ ಕೃತಿಕಾ ರಾವ್, ನಬಾರ್ಡ್‌ನ ರಮೇಶ್, ಎಸ್‌ಓಎಂನ ನಿರ್ದೇಶಕ ಡಾ.ರವೀಂದ್ರನಾಥ್ ನಾಯಕ್, ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಭುವನೇಶ್ವರಿ, ಬ್ರಹ್ಮಾವರ ಕೆವಿಕೆಯ ವಿಜ್ಞಾನಿ ಡಾ.ಧನಂಜಯ ಭಾಗವಹಿಸುವರು.
ಸಂಘದ ಸಿಇಒ ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News