ನಳಿನ್‌ಗೆ ಸಂಸ್ಕೃತಿ, ಸಂಸ್ಕಾರ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-11-19 12:41 GMT

ಮಂಗಳೂರು, ನ.19: ನಳಿನ್ ಕುಮಾರ್ ಕಟೀಲ್‌ಗೆ ಸಂಸ್ಕೃತಿ, ಸಂಸ್ಕಾರ ಇಲ್ಲ. ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಉಡುಪಿಯ ಕಾರ್ಯಕ್ರಮದ ಹಿನ್ನಲೆಯಲ್ಲಿ ರವಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಜೊತೆ ಮಾತನಾಡಿದರು.

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ನಳಿನ್ ಕುಮಾರ್ ಬೇಕೂಂತಲೇ ವಿವಾದ ಹುಟ್ಟು ಹಾಕುತ್ತಿದ್ದಾರೆ. ಪ್ರಮೋದ್ ಮಧ್ವರಾಜ್‌ರ ಇಮೇಜ್ ಹಾಳು ಮಾಡಲು, ಅವರ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಪ್ರಮೋದ್ ಮೂರು ಬಾರಿ ಸ್ಪಷ್ಟಣೆ ನೀಡಿದ್ದಾರೆ. ಬೇಕಿದ್ದರೆ ನೀವು ಪ್ರಮೋದ್‌ರನ್ನೇ ಕೇಳಿ, ಇಲ್ಲೇ ಇದ್ದಾರೆ ಎಂದರಲ್ಲದೆ, ಅನತಿ ದೂರದಲ್ಲಿದ್ದ ಸಚಿವ ಪ್ರಮೋದ್‌ರನ್ನು ಹತ್ತಿರ ಕರೆಸಿಕೊಂಡು ಪತ್ರಕರ್ತರ ಪ್ರಶ್ನೆಯನ್ನೇ ಪ್ರಮೋದ್‌ರ ಮುಂದಿಟ್ಟು ಉತ್ತರಿಸಿದರು. ಸಚಿವ ಪ್ರಮೋದ್ ಕೂಡಾ ಮುಖ್ಯಮಂತ್ರಿಯ ಹೇಳಿಕೆಗೆ ಧ್ವನಿಗೂಡಿಸಿದರು.

ನನ್ನ ಜೊತೆ ಸಾಕಷ್ಟು ಬಿಜೆಪಿಗರು, ಆರೆಸ್ಸೆಸಿಗರು ಸಂಪರ್ಕದಲ್ಲಿದ್ದಾರೆ. ಅದನ್ನೆಲ್ಲಾ ಹೇಳಿಕೊಳ್ಳಲು ಆಗುತ್ತಾ ? ನಾನಂತೂ ಆರೆಸ್ಸೆಸ್‌ನವರನ್ನು ಪಕ್ಷಕ್ಕೆ ಸೇರಿಸೋಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ನುಡಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಜಾರಿಗೊಳಿಸುವ ಈ ಸಂದರ್ಭದಲ್ಲಿ ಉಡುಪಿಯ ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವುದು ಎಷ್ಟು ಸರಿ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವೆಲ್ಲಿ ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಿದ್ದೇವೆ? ಅದು ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯಲಿದೆ ಎಂದರು.

ಉಡುಪಿ ಮಠಕ್ಕೆ ಭೇಟಿಗೆ ಸಂಬಂಧಿಸಿ ನೀವೇ (ಪತ್ರಕರ್ತರು) ಚರ್ಚೆ ಹುಟ್ಟುಹಾಕುತ್ತಿದ್ದೀರಿ ಎಂದು ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಈ ಸಂದರ್ಭ ಸಚಿವ ಯು.ಟಿ.ಖಾದರ್, ಶಾಸಕರಾದ ಐವನ್ ಡಿಸೋಜ, ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News