ಎಟಿಎಂ ನಂಬ್ರ ಪಡೆದು ವಂಚನೆ: ದೂರು
ಪುತ್ತೂರು, ನ. 19: ಬ್ಯಾಂಕ್ ಅಧಿಕಾರಿ ತಾನೆಂದು ಹೇಳಿಕೊಂಡು ಫೋನ್ ಮಾಡಿದ ವ್ಯಕ್ತಿಗೆ ಎಟಿಎಂ ಕಾರ್ಡ್‌ನ ನಂಬರ್ ತಿಳಿಸಿ ಹಣ ಕಳೆದುಕೊಂಡ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಕರ್ಕುಂಜ ಎಂಬಲ್ಲಿನ ನಿವಾಸಿ ಪ್ರಭಾತ್ ಎಂಬವರೇ ಹಣ ಕಳೆದುಕೊಂಡವರು. ಈ ಬಗ್ಗೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೋನ್ ಮಾಡಿದ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡಿದ್ದು, ಇವರ ಹೆಸರು ವಿಳಾಸ ಮತ್ತಿತರ ವಿವರಗಳನ್ನು ಮೊದಲೇ ಹೇಳಿ ನಂಬಿಕೆ ಹುಟ್ಟಿಸಿದ್ದ. ನಿಮ್ಮ ಎಟಿಎಂ ಕಾರ್ಡ್ ನಂಬರ್‌ನಲ್ಲಿ ತಿದ್ದುಪಡಿ ಮಾಡಲಿಕ್ಕಿದೆ ಎಂದು ಹೇಳಿ ಕಾರ್ಡ್ ನಂಬರ್ ಕೇಳಿ ಪಡೆದುಕೊಂಡಿದ್ದ ಎನ್ನಲಾಗಿದೆ. ಆತನ ಮಾತು ನಂಬಿದ ಪ್ರಭಾತ್ ನಂಬ್ರ ನೀಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅವರ ಬ್ಯಾಂಕ್ ಖಾತೆಯಿಂದ 39,500 ರೂ. ಹಣ ಕಡಿತಗೊಂಡಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.