×
Ad

ಹಕ್ಕುಗಳ ಬಗ್ಗೆ ಅರಿವು ಅಗತ್ಯ: ಡಾ.ಶಾನುಭಾಗ್‌

Update: 2017-11-19 20:50 IST

ಮಂಗಳೂರು, ನ.19: ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಅಗತ್ಯವಾಗಿದೆ ಎಂದು ಉಡುಪಿಯ ಮಾನವ ಹಕ್ಕು ಸಂರಕ್ಷಣಾ ಪ್ರತಿಷ್ಠಾನದ ಸಂಚಾಲಕ ಡಾ.ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

ನಗರದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಹಾಗೂ ಬೆಸೆಂಟ್ ಶಿಕ್ಷಣ ಸಂಸ್ಥೆ ವತಿಯಿಂದ ‘ಪರಿಸರ ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಜನರು ಮತ್ತು ಮಾಧ್ಯಮಗಳ ಪಾತ್ರ’ ವಿಷಯದ ಕುರಿತು ಬೆಸೆಂಟ್ ಕಾಲೇಜು ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಯಾವುದೇ ಹೋರಾಟಕ್ಕೂ ರೂಪುರೇಷೆ ಹೊಂದಿರಬೇಕು. ಮಾತ್ರವಲ್ಲದೆ ಅದು ಶಿಸ್ತುಬದ್ಧವಾಗಿರಬೇಕು. ಹೋರಾಟದ ಸಂದರ್ಭ ಸಾರ್ವಜನಿಕ ಸೊತ್ತುಗಳ ಹಾನಿ ಮಾಡುವುದರಿಂದಾಗಲಿ, ಹಿಂಸಾಚಾರ ನಡೆಸುವುದರಿಂದಾಗಲಿ ಸಮಸ್ಯೆಗೆ ಪರಿಹಾರ ದೊರೆಯದು ಎಂದವರು ಹೇಳಿದರು.

ಕಳೆದ 30 ವರ್ಷಗಳಿಂದ ನಾನು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ಯಾವುದೇ ಪ್ರಕರಣದಲ್ಲೂ ನಾನು ಯಾರಿಂದಲೂ ಹಣ ಪಡೆದಿಲ್ಲ. ಮುಂದೆ ಪಡೆಯುವುದೂ ಇಲ್ಲ. ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡವರು ತಮ್ಮ ಕುಟುಂಬವನ್ನು ಪೋಷಿಸಲು ಸ್ವಂತ ದುಡಿಮೆ ಮಾಡಬೇಕು. ಇನ್ನೊಬ್ಬರಿಂದ ಯಾವುದೇ ಅಪೇಕ್ಷೆ ಪಡೆಯಬಾರದು ಎಂದು ಡಾ.ಶಾನುಭಾಗ್ ಸಲಹೆ ನೀಡಿದರು.

ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟ ನಡೆದಿತ್ತು. ಲಕ್ಷಾಂತರ ಜನರು ಇದರಲ್ಲಿ ಪಾಲ್ಗೊಂಡಿದ್ದರು. ಕ್ರಮೇಣ ಹೋರಾಟಕ್ಕೆ ನಿರೀಕ್ಷಿತ ಜನಬೆಂಬಲ ಇಲ್ಲದಾಯಿತು. ಹೋರಾಟಗಳು ಕ್ಷೀಣಿಸುವಂತಾಗಬಾರದು ಎಂದು ಶಾನುಭಾಗ್ ಹೇಳಿದರು.‘ಪ್ರಶಸ್ತಿ ತಿರಸ್ಕರಿಸಿರುವುದಕ್ಕೆ ಕಾರಣ ಇತ್ತು’ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನಾನು ತಿರಸ್ಕರಿಸಿದ್ದೇನೆ.

ಸಾಮಾಜಿಕ ನ್ಯಾಯಕ್ಕಾಗಿ ನಾನು ನಡೆಸಿದ ಹೋರಾಟದಲ್ಲಿ ನನ್ನ ಬಳಿಗೆ ಬಂದ ಪ್ರಕರಣಗಳಲ್ಲಿ ಹಿರಿಯ ನಾಗರಿಕರಿಗೆ ನ್ಯಾಯ ದೊರೆತಿಲ್ಲ. ಎಂಡೋಸಲ್ಫಾನ್ ಸಂತ್ರಸ್ತರ ಬವಣೆ ನಿವಾರಣೆಯಾಗಿಲ್ಲ. ಹೀಗಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದು ಸರಿಯಲ್ಲ ಎಂದು ಹಿಂದೆ ಸರಿದಿದ್ದೆ. ನಾನು ಪ್ರಶಸ್ತಿ ತಿರಸ್ಕರಿಸಿರುವುದಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News