×
Ad

ಕಾಪುವಿನಲ್ಲಿ ಇಂದಿರಮ್ಮ-100

Update: 2017-11-19 20:59 IST

ಕಾಪು, ನ. 19: ದೇಶ ಕಂಡ ಅದ್ಭುತ ಮತ್ತು ಪರಮೋಚ್ಛ ನಾಯಕಿಯಾಗಿರುವ ಇಂದಿರಾ ಗಾಂಧಿಯವರು ಬಡತನ ನಿವಾರಣೆ, ಆರ್ಥಿಕ ಕ್ರೋಢೀಕರಣ, ಬ್ಯಾಂಕ್ ಕ್ಷೇತ್ರದ ಅವತರಣಿಕೆ ಸಹಿತ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ನಡೆಸಿರುವ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಅವರು ಶನಿವಾರ ಮಾಜಿ ಪ್ರಧಾನಿ ದಿ ಇಂದಿರಾ ಗಾಂಧಿಯವರ ಜನ್ಮ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರವಿವಾರ ಕಾಪು ರಾಜೀವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂದಿರಮ್ಮ - 100 ದೀಪ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧಿಕಾರದಲ್ಲಿರುವಷ್ಟು ಕಾಲ ದೇಶದ ಅಭಿವೃದ್ಧಿ ಕುರಿತಾಗಿಯೇ ಚಿಂತಿಸಿದ ಅವರ ಚಿಂತನೆಗಳು ಇಂದಿಗೂ ಅನುಕರಣೀಯವಾಗಿದೆ ಎಂದ ಅವರು ಮಹಿಳೆಯಾಗಿ ಇಂದಿರಾಗಾಂಧಿಯವರು ದೇಶದ ಶಕ್ತಿಯಾಗಿದ್ದರು. ನಮ್ಮ ದೇಶಕ್ಕೆ ಗಾಂಧಿ ಕುಟುಂಬ ಏನನ್ನು ನೀಡಿದೆ ಎಂದು ಪ್ರಶ್ನಿಸುವ ಬಿಜೆಪಿಗರು ದೇಶದ ಸ್ವಾತಂತ್ರ್ಯಕ್ಕಾಗಿ ತಾವೇನು ನೀಡಿದ್ದೇವೆ ಎನ್ನುವುದರ ಬಗ್ಗೆ ಜನರಿಗೆ ಅರ್ಥಮಾಡಿಕೊಡಬೇಕು ಎಂದರು.

ಪಕ್ಷದ ಮುಖಂಡ ಅಮೃತ್ ಶೆಣೈ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸ್ಮರಣೆ ಇಂದು ಅನಿವಾರ್ಯ ಮತ್ತು ಅವಶ್ಯಕತೆಯಾಗಿದೆ. ದೇಶವನ್ನು ಅತ್ಯಂತ ಪ್ರಬಲ ರಾಷ್ಟ್ರವನ್ನಾಗಿ ಮೂಡಿಸುವಲ್ಲಿ ಶ್ರಮಿಸಿದ ಇಂದಿರಾಗಾಂಧಿಯವರನ್ನು ಕೇವಲವಾಗಿ ಕಾಣುವ ಪ್ರಯತ್ನ ಇಂದಿನ ಆಡಳಿತಾರೂಡ ರಾಜಕಾರಣಿಗಳಿಂದ ನಡೆಯುತ್ತಿರುವುದು ಅತ್ಯಂತ ಖೇದಕರವಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಜನಾಂದೋಲನ ನಡೆಸಬೇಕು ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಸಂಜೀವ, ಉಸ್ತುವಾರಿ ಅಶೋಕ್ ಕುಮಾರ್ ಕೊಡವೂರು,, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್, ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಮೆಲ್ವಿನ್ ಡಿ ಸೋಜ, ನವೀನ್ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News