×
Ad

ಬೀಡಿ ಗುತ್ತಿಗೆದಾರರ ಮುಷ್ಕರ: ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಎಐಟಿಯುಸಿ ಒತ್ತಾಯ

Update: 2017-11-19 21:08 IST

ಮಂಗಳೂರು, ನ.19: ಬೀಡಿ ಗುತ್ತಿಗೆದಾರರು ನ.13ರಿಂದ ಕಮಿಷನ್ ಹೆಚ್ಚಳಕ್ಕಾಗಿ ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸುತ್ತಿದ್ದಾರೆ. ಉಪ ಕಾರ್ಮಿಕ ಆಯುಕ್ತರು ಹಲವಾರು ಸುತ್ತಿನ ಮಾತುಕತೆ ನಡೆಸಿದರೂ ಗುತ್ತಿಗೆದಾರರ ಬೇಡಿಕೆ ಇತ್ಯರ್ಥವಾಗಿಲ್ಲ. ಜಿಎಸ್‌ಟಿ ವ್ಯವಹಾರಿಕ ಕಾರಣದಿಂದ ರ್ಕಾುಕರು ತಯಾರಿಸಿದ ಬೀಡಿ ಮಾರಾಟವಾಗದೆ ಕಂಪೆನಿಯಲ್ಲಿ ದಾಸ್ತಾನು ಉಳಿದಿದೆ. ಇದರಿಂದಾಗಿ ಬೀಡಿ ಕಾರ್ಮಿಕರಿಗೆ ಕೆಲಸ ಕಡಿತವಾಗಿದೆ. ಬೀಡಿ ಗುತ್ತಿಗೆದಾರರ ಮುಷ್ಕರದಿಂದಾಗಿ ಬೀಡಿ ಕಾರ್ಮಿಕರಿಗೆ ಸಂಪೂರ್ಣವಾಗಿ ಕೆಲಸ ಇಲ್ಲವಾಗಿದ್ದು ಕಾರ್ಮಿಕರು ಕಂಗಾಲಾಗಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಎಐಟಿಯುಸಿ ಒತ್ತಾಯಿಸಿದೆ.

ಬೀಡಿ ಕೈಗಾರಿಕೆಯು ಕರಾವಳಿ ಜಿಲ್ಲೆಗಳ ಜೀವನಾಡಿಯಾಗಿದೆ. ಮಹಿಳೆಯರು ಮನೆಯಲ್ಲೇ ಇದ್ದುಕೊಂಡು ಕೆಲಸ ನಿರ್ವಹಿಸುವ ಕೈಗಾರಿಕೆ ಜಿಲ್ಲೆಯಲ್ಲಿ ಬೇರೆ ಇಲ್ಲ. ಜಿಲ್ಲೆಯ ವ್ಯವಹಾರಕ್ಕೆ ಹೆಚ್ಚಿನ ಪಾಲನ್ನು ಈ ಕೈಗಾರಿಕೆ ನೀಡಿದೆ. ಹಾಗಾಗಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬೇಕು ಎಂದು ಎಐಟಿಯುಸಿ ನೇತೃತ್ವದ ಎಸ್.ಕೆ ಬೀಡಿ ವರ್ಕರ್ಸ್‌ ಫೆಡರೇಶನ್‌ನ ನಿಯೋಗ ಆಗ್ರಹಿಸಿದೆ.

ನಿಯೋಗದಲ್ಲಿ ಸಿಪಿಐ ಕಾರ್ಯದರ್ಶಿ ವಿ. ಕುಕ್ಯಾನ್, ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಕೋಶಾಧಿಕಾರಿ ಬಿ. ಶೇಖರ್, ಜೊತೆ ಕಾರ್ಯದರ್ಶಿ ಸುರೇಶ್ ಕುಮಾರ್, ಎಂ. ಕರುಣಾಕರ್, ಕೆ. ತಿಮ್ಮಪ್ಪ ಮತ್ತಿತರಿದ್ದರು.

ಬೀಡಿ ಕಾರ್ಮಿಕರಿಗೆ ಕೆಲಸ ನೀಡಲು ಆಗ್ರಹ

ಕಳೆದೊಂದು ವಾರದಿಂದ ಕರಾವಳಿಯ ಬೀಡಿ ಕಾರ್ಮಿಕರು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಹಾಗಾಗಿ ಬೀಡಿ ಮಾಲಕರು ಕಾರ್ಮಿಕರಿಗೆ ಕೂಡಲೇ ಕೆಲಸ ನೀಡಬೇಕೆಂದು ಒತ್ತಾಯಿಸಿ ಎಐಟಿಯುಸಿ ಮತ್ತು ಸಿಐಟಿಯು ಸಂಘಟನೆಗಳ ನೇತೃತ್ವದ ಬೀಡಿ ಯೂನಿಯನ್‌ಗಳ ಉನ್ನತ ಮಟ್ಟದ ನಿಯೋಗವು ಸಹಾಯಕ ಕಾರ್ಮಿಕ ಆಯುಕ್ತರನ್ನು ಭೇಟಿಯಾಗಿ ಒತ್ತಾಯಿಸಿತು.

ಬೀಡಿ ಗುತ್ತಿಗೆದಾರರು ನಡೆಸುತ್ತಿರುವ ಮುಷ್ಕರದ ಬೇಡಿಕೆಯನ್ನು ಇತ್ಯರ್ಥಪಡಿಸಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಮಾಲಕರಿಗೆ ನಿರ್ದೇಶಿಸಬೇಕು ಎಂದು ನಿಯೋಗ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಸಿಐಟಿಯು ಮುಖಂಡರಾದ ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಪದ್ಮಾವತಿ ಶೆಟ್ಟಿ, ಎಐಟಿಯುಸಿ ವಿ.ಎಸ್. ಬೇರಿಂಜ, ಬಿ.ಶೇಖರ್, ಸುರೇಶ್ ಕುಮಾರ್, ಎಂ. ಕರುಣಾಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News