×
Ad

'ದುರ್ಬಲ ವರ್ಗಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಸರಕಾರದ ಗುರಿ'

Update: 2017-11-19 21:35 IST

ಉಡುಪಿ, ನ.19: ಸಮಾಜದ ದುರ್ಬಲ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವುದಕ್ಕೆ ತಮ್ಮ ಸರಕಾರ ಬದ್ಧವಾಗಿದೆ. ಸಮಾಜದ ಎಲ್ಲರಿಗೂ ಇದು ಸಿಗಬೇಕು ಎಂಬುದಷ್ಟೇ ನಮ್ಮ ಗುರಿಯಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿ.ಆರ್.ಎಸ್.ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ 200 ಹಾಸಿಗೆಗಳ ಸರಕಾರಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.

ಒಂಭತ್ತು ಮಹಡಿಗಳ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ ಮುಂದಿನ ಜ.15ಕ್ಕೆ ಮುಗಿದು ಲೋಕಾರ್ಪಣೆಗೊಳಿಸಲಾಗುವುದು. ಬಳಿಕ ಇಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಈವರೆಗೆ ಸಿಗುತಿದ್ದ ಎಲ್ಲಾ ಸೇವೆಗಳು ಅದೇ ರೀತಿಯಲ್ಲಿ ಉಚಿತವಾಗಿ ದೊರಕಲಿದೆ. ಇದು ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿ ಯುತ್ತದೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಸಂಶಯಬೇಡ ಎಂದ ಅವರು, ಇಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ಎಲ್ಲವೂ ಉಚಿತವಾಗಿರುತ್ತದೆ ಎಂದು ಭರವಸೆ ನೀಡಿದರು.

ಈಗ ಸರಕಾರಿ ಆಸ್ಪತ್ರೆ ಇರುವ ಜಾಗದಲ್ಲಿ ಮುಂದೆ ಬಿ.ಆರ್.ಶೆಟ್ಟಿ ಅವರು 400 ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ನಿರ್ಮಿಸಲಿದ್ದು, ಇಲ್ಲಿ ಅಗತ್ಯವಿದ್ದವರಿಗೆ ಈ ಆಸ್ಪತ್ರೆಯಲ್ಲೂ ಉಚಿತ ಸೇವೆ ದೊರಕಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇಂದು ಈ ಆಸ್ಪತ್ರೆಯನ್ನು ಉದ್ಘಾಟಿಸಲು ಕಾರಣ, ಇಂದು ಮಾಜಿ ಪ್ರಧಾನಿ, ಬಡವರ ಪರ ಹೋರಾಡಿದ ಅಪ್ರತಿಮ ನಾಯಕಿ ಇಂದಿರಾ ಗಾಂಧಿ ಅವರ 100ನೇ ಜನ್ಮದಿನವಾಗಿದೆ. ಗರೀಬಿ ಹಟಾವೋ ಘೋಷಣೆ ಮಾಡಿದ ಧೀರ ಮಹಿಳೆ. ದುರ್ಬಲ ವರ್ಗದ ಧ್ವನಿಯಾಗಿದ್ದವರು, ಮಹಿಳೆಯರಿಗೆ, ರಕ್ಷಣೆ ಇಲ್ಲದವರಿಗೆ ರಕ್ಷಣೆ ನೀಡಿದವರು ಹಾಗೂ ದೇಶದ ಒಗ್ಗಟ್ಟಿಗಾಗಿ ಪ್ರಾಣತ್ಯಾಗ ಮಾಡಿದವರು ಇಂದಿರಾ ಗಾಂಧಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಮ್ಮ ಭಾಷಣದ ಹೆಚ್ಚಿನ ಅವಧಿಯನ್ನು ಸರಕಾರಿ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ಹಸ್ತಾಂತರಿಸಲಾಗಿದೆ ಎಂದು ಹುಯಿಲೆಬ್ಬಿಸುತ್ತಿರುವ ತನ್ನ ಟೀಕಾಕಾರರಿಗೆ ಉತ್ತರಿಸಲು ಬಳಸಿಕೊಂಡರು. ಸರಕಾರಿ ಆಸ್ಪತ್ರೆಯ ಖಾಸಗೀಕರಣ ಎಂಬ ವಾದವನ್ನು ಸ್ಪಷ್ಟವಾದ ಶಬ್ದಗಳಲ್ಲಿ ನಿರಾಕರಿಸಿದ ಅವರು ಬಡವರು, ಹಿಂದುಳಿದವರು ಉಚಿತವಾಗಿ ಪಂಚತಾರಾ ಚಿಕಿತ್ಸೆಯನ್ನು ಪಡೆಯುವುದನ್ನು ವಿರೋಧಿಸುವವರ ಹುನ್ನಾರ ಇದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಸಂಪೂರ್ಣ ಸಜ್ಜುಗೊಂಡು ಮುಂದಿನ ಜ.15ರಂದು ಸಿದ್ಧರಾಮಯ್ಯ ಹಾಗೂ ರಮೇಶ್‌ಕುಮಾರ್ ಅವರ ಉಪಸ್ಥಿತಿಯಲ್ಲೇ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ. ಇಲ್ಲಿ ಈಗಿನಂತೆ ಮುಂದೆಯೂ ಎಲ್ಲಾ ಚಿಕಿತ್ಸೆಯೂ ಸಂಪೂರ್ಣ ಉಚಿತವಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿದ್ದು ನಡೆದರೆ, ಅದರ ವಿರುದ್ಧ ಧರಣಿ ನಡೆಸುವಲ್ಲಿ ನಾನು ಮುಂಚೂಣಿಯಲ್ಲಿರುತ್ತೇನೆ ಎಂದು ಘೋಷಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಶಾಸಕರಾದ ವಿನಯಕುಮಾರ್ ಸೊರಕೆ, ಕೆ.ಗೋಪಾಲ ಪೂಜಾರಿ, ಐವನ್ ಡಿಸೋಜ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಎಂ.ಎ.ಗಫೂರ್, ನರಸಿಂಹ ಮೂರ್ತಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಓ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

ಆಸ್ಪತ್ರೆಯನ್ನು ನಡೆಸುವ ಬಿ.ಆರ್.ಎಸ್. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ, ಉಪಾಧ್ಯಕ್ಷೆ ಡಾ.ಸಿ.ಆರ್.ಶೆಟ್ಟಿ ಹಾಗೂ ಸಲಹೆಗಾರರಾದ ಬಿ.ಎಸ್.ಶೆಟ್ಟಿ ಅವರು ಮಾತನಾಡಿದರು. ಮನೋಹರ ಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.

ಜ.1ರಿಂದ ಮತ್ತೆ 300 ಇಂದಿರಾ ಕ್ಯಾಂಟೀನ್: ಉಡುಪಿಯಲ್ಲಿ ಶಿಲಾನ್ಯಾಸ
ರಾಜ್ಯವನ್ನು ಹಸಿವಿನಿಂದ ಮುಕ್ತಗೊಳಿಸುವ ರಾಜ್ಯ ಸರಕಾರದ ಸಂಕಲ್ಪದಂತೆ ಅನ್ನಭಾಗ್ಯದೊಂದಿಗೆ ಈಗಾಗಲೇ ಬೆಂಗಳೂರಿನಲ್ಲಿ 200 ಇಂದಿರಾ ಕ್ಯಾಂಟೀನ್ ನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಕೇವಲ 5ರೂ.ಗೆ ತಿಂಡಿ ಹಾಗೂ 10ರೂ. ಊಟ ದೊರಕುತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

ಮುಂದಿನ ಜ.1ಕ್ಕೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ 200 ಕ್ಯಾಂಟೀನ್‌ನ್ನು ಪ್ರಾರಂಭಿಸುತ್ತೇವೆ. ರಾಜ್ಯದಲ್ಲಿ ಒಂದು ಲಕ್ಷ ಜನಕ್ಕೆ ಕನಿಷ್ಠ ಒಂದು ಇಂದಿರಾ ಕ್ಯಾಂಟೀನ್ ಇರುವಂತೆ ನೋಡಿಕೊಳ್ಳುತ್ತೇವೆ. ಹೀಗಾಗಿ ಮುಂದಿನ ಜ.1ಕ್ಕೆ ರಾಜ್ಯದಲ್ಲಿ 500 ಇಂದಿರಾ ಕ್ಯಾಂಟೀನ್‌ಗಳಿರುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರು ಉಡುಪಿ ನಗರ ಕೇಂದ್ರದಲ್ಲಿ ನಿರ್ಮಿಸಲಾಗುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇದರೊಂದಿಗೆ ಮಣಿಪಾಲ, ಕುಂದಾಪುರ ಹಾಗೂ ಕಾರ್ಕಳಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಕಾರ್ಯಾರಂಭಿಸಲಿವೆ.

ನಮ್ಮ ವಿರೋಧ ಪಕ್ಷ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಹಗಲು ಕನಸಿನೊಂದಿಗೆ ಪರಿವರ್ತನಾ ಯಾತ್ರೆ ಕೈಗೊಂಡಿದ್ದರೆ, ನಾವು ಮಾತ್ರ ರಾಜ್ಯವನ್ನು ಹಸಿವು ಮುಕ್ತಗೊಳಿಸುವ ಸಂಕಲ್ಪದೊಂದಿಗೆ ಮುಂದುವರಿಯುತಿದ್ದೇವೆ. ಇದೇ ಎರಡೂ ಪಕ್ಷಕ್ಕಿರುವ ವ್ಯತ್ಯಾಸ ಎಂದವರು ಲೇವಡಿ ಮಾಡಿದರು.
ಇಂದು ಪರಿವರ್ತನೆ ಬೇಕಾಗಿರುವುದು ಜಾತಿ-ಜಾತಿಗಳ ಮಧ್ಯೆ, ಧರ್ಮ- ಧರ್ಮಗಳ ಮಧಯೆ ಬೆಂಕಿಹಾಕುವವರ ಮನ ಪರಿವರ್ತನೆಯಾಗಬೇಕಾಗಿದೆ ಎಂದು ಸಿದ್ಧರಾಮಯ್ಯ ಹೇಳಿದರು.

ಕರ್ನಾಟಕ 2018ರ ಅ.2ಕ್ಕೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯ
ಸಮಾರಂಭದಲ್ಲಿ ಉಡುಪಿ ಜಿಲ್ಲೆಯನ್ನು ರಾಜ್ಯದ ಪ್ರಥಮ ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿಸಿದ ಸಿದ್ಧರಾಮಯ್ಯ ಅವರು ಇಡೀ ಕರ್ನಾಟಕವನ್ನು 2018ರ ಅಕ್ಟೋಬರ್ 2ರಂದು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಘೋಷಿಸುವ ಗುರಿಯೊಂದಿಗೆ ಕಾರ್ಯೊನ್ಮುಖವಾಗುವುದು ಇದೇ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News