×
Ad

ಕಳವು ಪ್ರಕರಣ: ಆರೋಪಿ ಸೆರೆ

Update: 2017-11-19 21:37 IST

ಮಂಗಳೂರು, ನ. 19: ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ಹಗಲು ಹೊತ್ತು ಮನೆಗಳ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂಡಬಿದ್ರೆ ಠಾಣಾ ಪೊಲೀಸರು ಆರೋಪಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉರ್ಕಿ ಬಡಗ ಎಡಪದವು ಗ್ರಾಮದ ಲೋಕೇಶ ಶೆಟ್ಟಿಗಾರ್ (19) ಬಂಧಿತ ಆರೋಪಿ. ಆರೋಪಿಯಿಂದ 221 ಗ್ರಾಂ ಚಿನ್ನದ ಆಭರಣ, ಒಂದು ಮೋಟಾರ್ ಸೈಕಲ್ ಹಾಗೂ ಕಳವು ಮಾಡಿದ್ದ 10 ಮೊಬೈಲ್ ಫೋನ್ ಸಹಿತ ಒಟ್ಟು 7 ಲಕ್ಷ ರೂ. ಅಂದಾಜು ಮೊತ್ತದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 28ರಂದು ಪುರೂರು ಗ್ರಾಮದ ಸುರೇಶ್ ಭಂಡಾರಿ ಎಂಬವರ ಮನೆಯಿಂದ ಚಿನ್ನಾಭರಣ ಕಳವು, ಸೆ. 25ರಂದು ಕರಿಂಜೆ ಗ್ರಾಮದ ಸದಾಶಿವ ಆಚಾರ್ಯ ಎಂಬವರ ಮನೆಯಿಂದ ಚಿನ್ನಾಭರಣ ಕಳವು, ಅದೇ ದಿನ ಪ್ರಾಂತ್ಯ ಗ್ರಾಮದ ವಿಜಯ ಕುಮಾರ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು, ಅ.11ರಂದು ಬೆಳುವಾಯಿ ಗ್ರಾಮದ ದಿನೇಶ್ ನಾಯ್ಕ ಎಂಬವರ ಮನೆಯಿಂದ ಚಿನ್ನಾಭರಣ ಕಳವು, ಅ.22ರಂದು ಪುತ್ತಿಗೆ ಗ್ರಾಮದ ಕಿಶೋರ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ, ಉಮಾ ಪ್ರಶಾಂತ್ ಹಾಗೂ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಮೂಡಬಿದಿರೆ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್, ಪಿಎಸ್‌ಐ ಗಳಾದ ಶಂಕರ ನಾಯರಿ, ದೇಜಪ್ಪ ಹಾಗೂ ಸಿಬ್ಬಂದಿಗಳಾದ ಎಚ್‌ಸಿ ರಾಜೇಶ್, ಸುರೇಂದ್ರ, ಉಮೇಶ್, ಅಖಿಲ್ ಅಹ್ಮದ್, ಸುಜನ್, ಚಂದ್ರಹಾಸ ರೈ, ಯಶವಂತ ಕುಮಾರ್, ಗೋವಿಂದ ರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News