‘ಮಕ್ಕಳ ಒತ್ತಡ ನಿವಾರಣೆಗೆ ಸಾಂಸ್ಕೃತಿಕ ಚಟುವಟಿಕೆಗಳು ಪೂರಕ’
ಉಡುಪಿ, ನ.19: ಇಂದಿನ ಮಕ್ಕಳು ಒತ್ತಡದಲ್ಲಿ ಬಳಲುತ್ತಿದ್ದಾರೆ. ಅವರ ಒತ್ತಡ ನಿವಾರಣೆಗಾಗಿ ಅವರು ನೃತ್ಯ, ನಾಟಕ, ಸಂಗೀತ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಪೂರಕವಾಗುತ್ತದೆ. ಸಾಂಸ್ಕೃತಿಕ ಚಟು ವಟಿಕೆಗಳು ಮಕ್ಕಳ ನೆನಪಿನ ಶಕ್ತಿಯನ್ನು ಬೆಳೆಸುತ್ತದೆ. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಉಡುಪಿ ನೃತ್ಯ ನಿಕೇತನ ಸಂಸ್ಥೆಯ ನಿರ್ದೇಶಕಿ ವಿದುಷಿ ಲಕ್ಷ್ಮೀ ಗುರುರಾಜ್ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಉದ್ಯಾವರ ವಿಠೋಬ ರುಕುಮಾಯಿ ನಾರಾಯಣ ಮಂದಿರದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ 8ನೆ ವರ್ಷದ ಯುಎಫ್‌ಸಿ ಮಕ್ಕಳ ಹಬ್ಬದ ಸಮಾರೋಪ ಸಮಾ ರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಮಕ್ಕಳನ್ನು ಮಕ್ಕಳಂತೆ ಇರಲು ಬಿಡಿ. ನಮ್ಮ ಆಲೋಚನೆಗಳನ್ನು ಅವರಲ್ಲಿ ತುರಿ ಕಿಸಬೇಡಿ. ಕಲಿಕೆಯ ಬಗ್ಗೆ ತೀರ ಒತ್ತಡ ಹೇರದೆ ಸಾಂಸ್ಕೃತಿಕ ಚಟುವಟಿಕೆಗಳತ್ತ ಅವರು ಮುಖ ಮಾಡುವಂತೆ ಪ್ರೊತ್ಸಾಹಿಸಿ. ಇಂದಿನ ಮಕ್ಕಳು ಹೈಪರ್ ಆ್ಯಕ್ಟಿವ್ ಆಗಲು ಕಾರಣ ಅತಿಯಾದ ಮೊಬೈಲ್ ಬಳಕೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು. ತಮ್ಮ ಮಕ್ಕಳನ್ನು ಇತರ ಮಕ್ಕಳೊಡನೆ ಹೋಲಿಸಬೇಡಿ. ಇದು ಮಕ್ಕಳ ಭವಿಷ್ಯದ ಮೇಲೆ ಋಣತ್ಮಾಕ ಪರಿಣಾಮ ಬೀರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎ. ಹರೀಶ್ ಕಿಣಿ, ಜಿಲ್ಲಾ ಶಿಕ್ಷಣಾಧಿಕಾರಿ ನಾಗೇಶ ಶ್ಯಾನುಬಾಗ್, ಉಡುಪಿ ಉದ್ಯಾವರ ರೋಟರಿ ಕ್ಲಬ್ ಅಧ್ಯಕ್ಷ ಪಿ.ತೇಜೇಶ್ವರ ರಾವ್ ಮಾತನಾಡಿದರು. ಉದ್ಯಾವರ ಗ್ರಾಪಂ ಅಧ್ಯಕ್ಷ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾರ್ ಪಳ್ಳಿ, ಸಂಸ್ಥೆಯ ಅಧ್ಯಕ್ಷ ಅನುಪ್ ಕುಮಾರ ಉಪಸ್ಥಿತರಿದ್ದರು.
ಮಾಜಿ ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಸಾಲಿಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ವಂದಿಸಿದರು ಆಬಿದ್ ಆಲಿ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಹಬ್ಬ ಉದ್ಘಾಟನೆ: ಯುಎಫ್‌ಸಿ ಮಕ್ಕಳಹಬ್ಬವನ್ನು ಸ್ಟಾರ್ ಸುವರ್ಣ ಡಾನ್ಸ್ ಜೂನಿಯರ್ ಡಾನ್ಸ್ ರಿಯಾಲಿಟಿ ಶೋನ ಪ್ರತಿಭೆ ಕೃತಿ ಎಸ್.ಉಚ್ಚಿಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಪು ಶಾಸಕ ವಿನಯ ಕುಮಾರ್ ಸೊರಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಉದ್ಯಾವರ ಗ್ರಾಪಂ ಅದ್ಯಕ್ಷ ಸುಗಂಧಿ ಶೇಖರ್ ಮಾತನಾಡಿದರು. ಊಡಾದ ಸದಸ್ಯ ಗಿರೀಶ್ ಕುಮಾರ್, ಗ್ರಾಪಂ ಉಪಾದ್ಯಕ್ಷ ರಿಯಾಝ್ ಪಳ್ಳಿ ನಿರ್ದೇಶಕಿ ಚಂದ್ರಾವತಿ ಭಂಡಾರಿ, ಶರತ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭೆಗಳಾದ ಕೃತಿ ಎಸ್.ಉಚ್ಚಿಲ್ ಮತ್ತು ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಅನುಪ್ ಕುಮಾರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಯು.ಆರ್ ಚಂದ್ರಶೇಖರ್ ವಂದಿಸಿದರು. ಇದಕ್ಕೂ ಮುನ್ನ ಮೇಲ್ಪೇಟೆಯಿಂದ ಮಕ್ಕಳ ವರ್ಣರಂಜಿತ ಮೆರವಣಿಗೆ ಜರಗಿತು.