ಮೃತ ಯುವಕನ ಕಣ್ಣು ದಾನಕ್ಕೆ ಅವಕಾಶ ನಿರಾಕರಣೆ: ಕುಟುಂಬಸ್ಥರ ಆರೋಪ
ಮಂಗಳೂರು, ನ.19: ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ಕಣ್ಣು ದಾನಕ್ಕೆ ಕುಟುಂಬಸ್ಥರು ಮುಂದಾದರೂ ವೆನ್ಲಾಕ್ ಆಸ್ಪತ್ರೆಯ ವೈದ್ಯರಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಈ ಮಧ್ಯೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಕಣ್ಣುದಾನ ಪ್ರಕ್ರಿಯೆಗೆ ನಿರ್ದಿಷ್ಟ ವಿಧಾನ ಇದೆ. ಈ ಪ್ರಕ್ರಿಯೆಯಲ್ಲಿ ನಮ್ಮಿಂದೇನೂ ಲೋಪವಾಗಿಲ್ಲ ಎಂದಿದ್ದಾರೆ.
ಬೈಕಂಪಾಡಿಯಲ್ಲಿ ಶನಿವಾರ ಸಂಜೆ 4:30ಕ್ಕೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಜಪ್ಪಿನಮೊಗರಿನ ಪುಟ್ಟರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. 5 ಗಂಟೆಗೆ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ತರಲಾಗಿತ್ತು. 7 ಗಂಟೆಗೆ ಅವರ ಸ್ನೇಹಿತರು ಆಸ್ಪತ್ರೆಗೆ ಆಗಮಿಸಿ ಕಣ್ಣು ದಾನ ಮಾಡುವಂತೆ ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.
ಅದರಂತೆ ಮೃತರ ಕುಟುಂಬಸ್ಥರು ಚರ್ಚಿಸಿ 7:45ರ ವೇಳೆಗೆ ಕಣ್ಣು ದಾನಕ್ಕೆ ಸಮ್ಮತಿಸಿ ಸೂಚಿಸಿ ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ತಿಳಿಸಿ ಇದಕ್ಕೆ ಯಾವ ರೀತಿಯ ಪ್ರಕ್ರಿಯೆ ನಡೆಸಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.
ಎಲ್ಲ ಪ್ರಕ್ರಿಯೆ ನಾವೇ ಮಾಡುತ್ತೇವೆ. ಹೊರಗೆ ಕುಳಿತುಕೊಳ್ಳುವಂತೆ ವೆನ್ಲಾಕ್ ವೈದ್ಯರು ತಿಳಿಸಿದ್ದು, ರಾತ್ರಿ 9 ಗಂಟೆಯಾದರೂ ವೈದ್ಯರು ಯಾವುದೇ ಸ್ಪಂದನೆ ನೀಡಿಲ್ಲ. ಮತ್ತೊಮ್ಮೆ ವೈದ್ಯರಲ್ಲಿ ವಿಚಾರಿಸಿದಾಗ ಅತ್ತಾವರ ಆಸ್ಪತ್ರೆಯ ವೈದ್ಯರು ಬರಬೇಕು ಎಂದಿದ್ದಾರೆ. ಆದರೆ ಅಲ್ಲಿನ ವೈದ್ಯರು 20 ನಿಮಿಷ ಮೊದಲೇ ಆಗಮಿಸಿ ಕಾಯುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಪೊಲೀಸರಿಂದ ವರದಿ ಬಂದಿಲ್ಲ ಎಂದು ಹೇಳಿ ವಿಳಂಬ ಮಾಡಿದ್ದಾರೆ. ಕೊನೆಗೆ ರಾತ್ರಿ 11:30ಕ್ಕೆ ಪುಟ್ಟರಾಜು ಅವರ ಎರಡೂ ಕಣ್ಣುಗಳನ್ನು ತೆಗೆಯಲಾಯಿತು. ಮೃತಪಟ್ಟು 6 ಗಂಟೆ ಅವಧಿಯ ಒಳಗಾಗಿ ಕಣ್ಣು ತೆಗೆಯಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ 7 ಗಂಟೆಯಾಗಿದೆ. ವೈದ್ಯರಲ್ಲಿ ಪ್ರಶ್ನಿಸಿದಾಗ ಒಂದು ಕಣ್ಣು ಹಾನಿಗೊಂಡಿದ್ದು, ಇನ್ನೊಂದು ಕಣ್ಣನ್ನು ಜೋಡಿಸಬಹುದು ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ಮೃತರ ಸ್ನೇಹಿತರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಪುಟ್ಟರಾಜು ಅವರ ಕಣ್ಣು ತೆಗೆಯಲು ಕುಟುಂಬಸ್ಥರು ಮಾಡಿದ ನಿರ್ಧಾರ ಸ್ವಾಗತಾರ್ಹ. ಆದರೆ ಅದಕ್ಕೆ ಹಲವು ಪ್ರಕ್ರಿಯೆಗಳಿವೆ. ಪೊಲೀಸರು ಬಂದು ಪಂಚನಾಮೆ ಮಾಡಬೇಕು. ಮರಣೋತ್ತರ ಪರೀಕ್ಷೆ ನಡೆಸುವರಿಗೆ ನಿರ್ದಿಷ್ಟ ಅರ್ಜಿ ನಮೂನೆ ಭರ್ತಿ ಮಾಡಿ ನೀಡಬೇಕು. ನಾವು ನೇರವಾಗಿ ಕಣ್ಣು ತೆಗೆಯಲು ಆಗುವುದಿಲ್ಲ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ತಿಳಿಸಿದ್ದಾರೆ.