ವಿದ್ಯಾರ್ಥಿನಿಯ ಹಿಜಾಬ್ ಎಳೆದ ಅಧ್ಯಾಪಕ
ನ್ಯೂಯಾರ್ಕ್,ನ.19: ಜನಾಂಗೀಯ ದ್ವೇಷದ ಪ್ರಕರಣವೊಂದರಲ್ಲಿ, ಅಮೆರಿಕದ ವರ್ಜಿನಿಯದಲ್ಲಿ ಶಾಲಾ ಅಧ್ಯಾಪಕನೊಬ್ಬ ಮುಸ್ಲಿಂ ವಿದ್ಯಾರ್ಥಿನಿಯ ಹಿಜಾಬ್ ಎಳೆದು ಅವಮಾನಿಸಿದ ಘಟನೆಯು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಜಿನಿಯಾದ ಬ್ರಾಡ್‌ಡೊಕ್ ಹೈಸ್ಕೂಲ್‌ನಲ್ಲಿ ತನ್ನ ಸ್ನೇಹಿತೆಯರ ಜೊತೆ ಬಾಲಕಿ ಮಾತನಾಡುತ್ತಿದ್ದಾಗ, ಅಲ್ಲಿಗೆ ಬಂದ ಅಧ್ಯಾಪಕ ಆಕೆಯ ಹಿಜಾಬ್‌ನ್ನು ಹಿಡಿದೆಳೆದಿರುವುದಾಗಿ ಬಾಲಕಿ ಟ್ವೀಟ್ ಮಾಡಿದ್ದಾಳೆ.
ಘಟನೆಯ ಬಳಿಕ ವಿದ್ಯಾರ್ಥಿನಿ ವಿಶ್ರಾಂತಿ ಕೊಠಡಿಗೆ ತೆರಳಿ, ತನ್ನ ಪೋಷಕರಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿದಳೆನ್ನಲಾಗಿದೆ.ಈ ಬಗ್ಗೆ ಪೋಷಕರು ಶಾಲಾಡಳಿತವನ್ನು ಸಂಪರ್ಕಿಸಿ, ದೂರು ನೀಡಿದರು. ಆನಂತರ ಈ ಬಗ್ಗೆ ತನ್ನ ಸಹದ್ಯೋಗಿಗಳಿಗೆ ಸಮಜಾಯಿಷಿ ನೀಡಿದ ಅಧ್ಯಾಪಕನು, ಆಕೆಯ ತಲೆಮೇಲೆ ಧರಿಸಿದ್ದ ಕ್ಯಾಪ್ ಅನ್ನು ತಮಾಷೆಗಾಗಿ ತೆಗೆಯಲು ಯತ್ನಿಸಿದಾಗ ಹಿಜಾಬ್ ಕಿತ್ತು ಬಂದಿತೆಂದು ಹೇಳಿದ್ದಾನೆ.
ಈ ಘಟನೆಗೆ ಅಮೆರಿಕದ ಮುಸ್ಲಿಂ ಸಂಘಟನೆಗಳು ಹಾಗೂ ಮಾನವಹಕ್ಕು ಸಂಸ್ಥೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಕನ ವರ್ತನೆಯ ಸೂಕ್ತವಾದುದಲ್ಲ ಹಾಗೂ ಘಟನೆ ಬಗ್ಗೆ ಆತ ವಿದ್ಯಾರ್ಥಿ ಹಾಗೂ ಕುಟುಂಬದ ಕ್ಷಮೆಯಾಚಿಸಿರುವುದಾಗಿ ಶಾಲಾ ಪ್ರಾಂಶುಪಾಲ ಡೇವಿಡ್ ಥಾಮಸ್ ತಿಳಿಸಿದ್ದಾರೆ.
ದೂರಿಗೆ ಸಂಬಂಧಿಸಿ ತನಿಖೆ ಪೂರ್ಣಗೊಳ್ಳುವ ತನಕ ಆತನನ್ನು ರಜೆಯಲ್ಲಿ ಕಳುಹಿಸಲಾಗಿದೆಯೆಂದು ಅವರು ಹೇಳಿದ್ದಾರೆ.