ಡಿ. 10ರಂದು ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ

Update: 2017-11-20 07:28 GMT

ಮಂಗಳೂರು, ನ.20: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಹಮ್ಮಿಕೊಂಡಿರುವ ತಾಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನ ಡಿ. 10ರಂದು ಬಂಟ್ವಾಳದಲ್ಲಿ ನಡೆಯಲಿದೆ. ಇದರ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಂ ರೈ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ಬಿ.ಸಿ.ರೋಡ್ ನಾರಾಯಣ ಗುರು ವೃತ್ತದ ಬಳಿ ಇರುವ ಸ್ಪರ್ಶಾ ಕಲಾ ಮಂದಿರದಲ್ಲಿ ಸಮ್ಮೇಳನ ಜರಗಲಿದೆ ಎಂದರು.

ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಉದ್ಘಾಟನೆ, ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ತುಳುವೆರೆ ಗೊಬ್ಬುಲು, ಪಾಡ್ದನ, ಬೀರ ಸಂದಿ, ಉರಲ್ ಮೊದಲಾದ ಕಾರ್ಯಕ್ರಮಗಳೊಂದಿಗೆ ಈ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.

ಮಲಾರ್ ಜಯರಾಂ ರೈಯವರು ನವಭಾರತ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿ ಬಳಿಕ ಡೆಕ್ಕನ್ ಹೆರಾಲ್ಡ್ ಆಂಗ್ಲ ಪತ್ರಿಕೆಯಲ್ಲಿ ವರದಿಗಾರರಾಗಿ, ಹಿರಿಯ ಉಪ ಸಂಪಾದಕರಾಗಿ, ಜಿಲ್ಲಾ ವರದಿಗಾರರಾಗಿ ರಾಜ್ಯದ ವಿವಿಧ ಕಡೆ ಕಾರ್ಯ ನಿರ್ವಹಿಸಿದವರು. ಲೇಖಕರಾಗಿ ಗುರುತಿಸಿಕೊಂಡಿರುವ ಇವರು ‘ರಸದಿಂಜಿ ರಾಮಾಯಾಣ’, ‘ತುಳುನಾಡ್’, ಪುಟಪರ್ತಿ ಪುಣ್ಯಭೂಮಿ’, ‘ಸಾಯಿಪಾತೆರೆದ ಅಮೃತ’, ‘ಅಪ್ಪೆಇಲ್‌ಲ್’, ‘ಬೇರ್‌ಮರ್ದ್’ ಹಾಗೂ ತುಳುವೆರೆಂಕುಲು ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ಕೂಡಾ ಅನೇಕ ಪುಸ್ತಕಗಳನ್ನು ಇವರು ಬರೆದಿದ್ದಾರೆ ಎಂದು ಎ.ಸಿ. ಭಂಡಾರಿ ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸಮ್ಮೇಳನ ಉಪಸಮಿತಿಯ ಸಂಚಾಲಕ ಡಾ. ವೈ.ಎನ್. ಶೆಟ್ಟಿ, ಸಮ್ಮೇಳನ ಸಮಿತಿಯ ಅಧ್ಯಕ್ಷ ಸುದರ್ಶನ್ ಜೈನ್, ಪ್ರಧಾನ ಸಂಚಾಲಕ ಗೋಪಾಲ್ ಅಂಚನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News