ಲಾಕೌಟ್ ಹಿಂದಕ್ಕೆ ಪಡೆಯುವ ನಿರ್ಧಾರ ಪ್ರಕಟಿಸದ ಸುಜ್ಲಾನ್
ಪಡುಬಿದ್ರೆ, ನ. 20: ಇಲ್ಲಿನ ಪಡುಬಿದ್ರೆಯಲ್ಲಿ ಕಾರ್ಯಾಚರಿಸುತಿದ್ದ ಸುಜ್ಲಾನ್ ಕಂಪೆನಿಯು ಕಳೆದ ವಾರ ಲಾಕೌಟ್ ಘೋಷಣೆಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸೋಮವಾರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ. ಈ ಮೂಲಕ ಕಾರ್ಮಿಕರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಚ್ಚುಗಡೆಯ ಘೋಷಣೆಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸೂಕ್ತ ನಿರ್ಧಾರ ಸೋಮವಾರ ಪ್ರಕಟಿಸುವುದಾಗಿ ಹೇಳಿದ್ದರೂ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸುಜ್ಲಾನ್ ಕಂಪೆನಿ ನಷ್ಟದ ನೆಪವೊಡ್ಡಿ ಮಂಗಳವಾರ ಏಕಾಏಕಿ ಲಾಕೌಟ್ ಘೋಷಣೆ ಮಾಡಿತ್ತು. ಇದನ್ನು ಖಂಡಿಸಿ ಕಂಪೆನಿ ಕಾರ್ಮಿಕರು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಗುರುವಾರ ಜಿಲ್ಲಾಧಿಕಾರಿ, ಎಸ್‌ಪಿ, ಕಾರ್ಮಿಕ ಇಲಾಖೆಯ ಅಧಿಕಾರಗಳ ಸಭೆಯಲ್ಲಿ ಕಂಪೆನಿ ಮುಖ್ಯಸ್ಥ ವಿಜಯ ಅಸ್ನಾನಿ ಅವರು ಕಾರ್ಮಿಕರ ಹಿತದೃಷ್ಟಿಯಿಂದ ಕಂಪೆನಿಯನ್ನು ತೆರೆಯುವ ಬಗ್ಗೆ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ ಸೋಮವಾರ ತಿಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸೋಮವಾರ ಸಂಜೆಯವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಕಂಪೆನಿ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಅಲ್ಲದೆ ಸೋಮವಾರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ. ಆದರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ನಾಳೆ ಬೆಳಗ್ಗೆ ಉಡುಪಿ ಎಸ್‌ಪಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ನಾಳೆಯೂ ಈ ಬಗ್ಗೆ ಸೂಕ್ತ ನಿರ್ಧಾರ ಕಂಪೆನಿ ಪ್ರಕಟಿಸದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಮಂಗಳವಾರ ತೀರ್ಮಾಣಿಸುವುದಾಗಿ ಇಂಟೆಕ್ ಜಿಲ್ಲಾಧ್ಯಕ್ಷ ಗಣೇಶ್ ಕೊಟ್ಯಾನ್ ಹೇಳಿದರು.