24 ಗಂಟೆಗಳೊಳಗೆ ಮೋದಿ ಸರಕಾರ ತೆಗೆದುಕೊಳ್ಳಬೇಕಿದೆ ನಿರ್ಧಾರ

Update: 2017-11-20 15:48 GMT

ಹೊಸದಿಲ್ಲಿ,ನ.20: ಅದಾನಿ ಗ್ರೂಪ್ ತನ್ನ ಆಮದುಗಳಲ್ಲಿ ಖರೀದಿ ಮೊತ್ತವನ್ನು 5,500 ಕೋ.ರೂ.ಗಳಷ್ಟು ಹೆಚ್ಚಿಸಿತ್ತು ಎನ್ನುವುದನ್ನು ಪತ್ತೆ ಹಚ್ಚಿರುವ ಕಂದಾಯ ಗುಪ್ತಚರ ಮಹಾನಿರ್ದೇಶನಾಲಯ(ಡಿಆರ್‌ಐ)ಕ್ಕೆ ಈ ಆರೋಪಗಳ ಬಗ್ಗೆ ತಾನು ಗಂಭೀರ ತನಿಖೆ ನಡೆಸಬೇಕೇ ಎನ್ನುವುದನ್ನು ನಿರ್ಧರಿಸಲು ಕೇವಲ ಒಂದು ದಿನದ ಕಾಲಾವಕಾಶ ಉಳಿದುಕೊಂಡಿದೆ. ಡಿಆರ್‌ಐ ವಿತ್ತ ಸಚಿವಾಲಯದ ಕಂದಾಯ ಇಲಾಖೆಯ ತನಿಖಾ ಘಟಕವಾಗಿದೆ.

ಅದಾನಿ ಗ್ರೂಪ್‌ಗೆ ಸೇರಿದ ಅದಾನಿ ಪವರ್ ಮಹಾರಾಷ್ಟ್ರ ಲಿ.,ಅದಾನಿ ಪವರ್ ರಾಜಸ್ಥಾನ ಲಿ. ಮತ್ತು ಮಹಾರಾಷ್ಟ್ರ ಈಸ್ಟರ್ನ್ ಗ್ರಿಡ್ ಪವರ್ ಟ್ರಾನ್ಸ್‌ಮಿಷನ್ ಕಂ.ಲಿ. ವಿದ್ಯುತ್ ಉತ್ಪಾದನಾ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡಿದ್ದ ಕಾರ್ಯತಂತ್ರಗಳ ಬಗ್ಗೆ ಡಿಆರ್‌ಐ ತನಿಖೆ ನಡೆಸಿತ್ತು. 2014 ಮೇ 15ರಂದು ಈ ಕಂಪನಿಗಳ ವಿರುದ್ಧ ಶೋ ಕಾಸ್ ನೋಟಿಸ್‌ಗಳನ್ನು ಹೊರಡಿಸಿದ್ದ ಡಿಆರ್‌ಐ ಆಮದು ಬಿಲ್‌ಗಳಲ್ಲಿ 5,468 ಕೋ.ರೂ.ಗಳನ್ನು ಹೆಚ್ಚುವರಿಯಾಗಿ ಉಲ್ಲೇಖಿಸಲಾಗಿದೆ ಎಂದು ಆರೋಪಿಸಿತ್ತು. ಆಮದು ಮಾಡಲಾದ ಯಂತ್ರೋಪಕರಣಗಳ ಮುಟ್ಟುಗೋಲು ಮತ್ತು ದಂಡ ಹೇರಿಕೆಯ ಬಗ್ಗೆ ಈ ನೋಟಿಸ್‌ಗಳಲ್ಲಿ ಪ್ರಸ್ತಾಪಿಸಲಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಸಂಸ್ಥೆಯ ವ್ಯವಹಾರಗಳ ಬಗ್ಗೆ ವರದಿ ಮಾಡಿದ್ದ ಅಂತರ್ಜಾಲ ಸುದ್ದಿತಾಣ ‘ದಿ ವೈರ್’ ಇದೀಗ ಅದಾನಿ ಗ್ರೂಪ್‌ನ ಹಗರಣದ ಮೆಲೆ ಬೆಳಕು ಚೆಲ್ಲಿದೆ. ಇಂಡೋನೇಷ್ಯಾದಿಂದ ಕಲ್ಲಿದ್ದಲು ಮತ್ತು ವಿದ್ಯುತ್ ಉತ್ಪಾದನಾ ಯಂತ್ರೋಪಕರಣಗಳ, ಹೆಚ್ಚುವರಿ ಬಿಲ್‌ಗಳಡಿ ಆಮದುಗಳ ಕುರಿತು ಡಿಆರ್‌ಐ ತನಿಖೆಯ ದಾಖಲೆಗಳು ದಿ ವೈರ್ ಬಳಿಯಿವೆ. ಈ ಅಕ್ರಮದಿಂದಾಗಿ ವಿದ್ಯುತ್ ಗ್ರಾಹಕರು ತಾವು ಬಳಸಿದ ಪ್ರತಿ ಯೂನಿಟ್ ವಿದ್ಯುತ್‌ಗೆ 50 ಪೈಸೆಗಳಿಂದ 2 ರೂ.ವರೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸುವಂತಾಗಿರಬಹುದು ಎಂದು ಡಿಆರ್‌ಐ ಪ್ರತಿಪಾದಿಸಿದೆ.

ತನ್ನ ತನಿಖೆಯನ್ನು ಮುಂದುವರಿಸಿ ಇನ್ನಷ್ಟು ಆಳವಾಗಿ ಕೆದಕಿದ್ದ ಡಿಆರ್‌ಐ ಯಂತ್ರೋಪಕರಣಗಳ ವೌಲ್ಯವನ್ನು 1,173 ಕೋ.ರೂ.ಗಳಷ್ಟು ಹೆಚ್ಚಾಗಿ ತೋರಿಸಿದ್ದಕ್ಕಾಗಿ ಅದಾನಿ ಗ್ರೂಪ್‌ನ ಇನ್ನೂ ಆರು ಕಂಪನಿಗಳಿಗೆ ಕಳೆದ ವರ್ಷ ಶೋ ಕಾಸ್ ನೋಟಿಸ್ ಗಳನ್ನು ಜಾರಿಗೊಳಿಸಿತ್ತು.

2017,ಆ.21ರಂದು ಡಿಆರ್‌ಐನ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರಿ ಕೆವಿಎಸ್ ಸಿಂಗ್ ಅವರು ಅದಾನಿ ಗ್ರೂಪ್ ವಿರುದ್ಧದ ಎಲ್ಲ ಆರೋಪಗಳನ್ನು ಮತ್ತು ವಿನೋದ ಅದಾನಿ ಸೇರಿದಂತೆ ಈ ಕಂಪನಿಗಳ ವಿವಿಧ ಅಧಿಕಾರಿಗಳ ವಿರುದ್ಧದ ದಂಡ ವಸೂಲಿ ಪ್ರಕ್ರಿಯೆಗಳನ್ನು ಕೈಬಿಟ್ಟಿದ್ದರು.

ಆಂಗ್ಲ ದೈನಿಕವೊಂದು ಸಿಂಗ್ ಆದೇಶವನ್ನು 2017,ಆ.25ರಂದು ವರದಿ ಮಾಡಿತ್ತು. ಅದೇ ದಿನ ಮಧ್ಯಾಹ್ನ ಅದಾನಿ ಗ್ರೂಪ್‌ನ ಅಧ್ಯಕ್ಷರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ತೀರ ಆಪ್ತರೂ ಆಗಿರುವ ಗೌತಮ ಅದಾನಿಯವರು ಆಗ ಕಂದಾಯ ಕಾರ್ಯದರ್ಶಿಯಾಗಿದ್ದ ಹಸ್ಮುಖ್ ಆಧಿಯಾರನ್ನು ಭೇಟಿಯಾಗಿದ್ದರು. ಈ ಭೇಟಿಯ ಉದ್ದೇಶ ಏನಾಗಿತ್ತು ಎನ್ನುವುದು ತಿಳಿದು ಬಂದಿಲ್ಲ.

  ಭೇಟಿಯ ಅಜೆಂಡಾ ಮತ್ತು ಫಲಶೃತಿಯ ವಿವರ ಕೋರಿ ಅದಾನಿಯವರಿಗೆ ದಿ ವೈರ್ ಇ-ಮೇಲ್ ಕಳುಹಿಸಿತ್ತು. ಡಿಆರ್‌ಐನ ಶೋ ಕಾಸ್ ನೋಟಿಸುಗಳು ಮತ್ತು ಕೆವಿಎಸ್ ಸಿಂಗ್ ಅವರ ಆದೇಶ ಮಾತುಕತೆ ವೇಳೆ ಪ್ರಸ್ತಾವಗೊಂಡಿದ್ದವೇ ಎಂದು ಮೇಲ್‌ನಲ್ಲಿ ಪ್ರಶ್ನಿಸಲಾಗಿತ್ತು. ಸಿಂಗ್ ಅವರ ಆದೇಶದ ವಿರುದ್ಧ ಡಿಆರ್‌ಐ ಮೇಲ್ಮನವಿಯನ್ನು ಸಲ್ಲಿಸಲು ಅಂತಿಮ ಗಡುವು ಸಮೀಪಿಸುತ್ತಿರುವುದರಿಂದ ಅಂತಹ ಮೇಲ್ಮನವಿ ಸಲ್ಲಿಕೆ ಕುರಿತು ಆಧಿಯಾ ಮತ್ತು ಸಚಿವಾಲಯ ನಿರ್ಧಾರವನ್ನೇನಾದರೂ ಕೈಗೊಂಡಿವೆಯೇ ಎಂದು ಪ್ರಶ್ನಿಸಿ ಈಗ ವಿತ್ತ ಕಾರ್ಯದರ್ಶಿಯಾಗಿರುವ ಆಧಿಯಾರಿಗೂ ದಿ ವೈರ್ ಇ-ಮೇಲ್ ಕಳುಹಿಸಿತ್ತು. ಆದರೆ ಈವರೆಗೆ ಅದಾನಿ ಅಥವಾ ಆಧಿಯಾ ಈ ಮೇಲ್‌ಗಳಿಗೆ ಉತ್ತರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News