ಪದ್ಮಾವತಿ ಸಿನೆಮಾ ವಿವಾದ: ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

Update: 2017-11-20 15:15 GMT

ಹೊಸದಿಲ್ಲಿ, ನ. 20: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಲನಚಿತ್ರ ಬಿಡುಗಡೆ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಹಾಗೂ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ.

 ವಕೀಲರೊಬ್ಬರು ಸಲ್ಲಿಸಿದ ಮನವಿಯನ್ನು ‘ಅಪಕ್ವ’ ಎಂದು ಕರೆದಿರುವ ಸುಪ್ರೀಂ ಕೋರ್ಟ್, ದೇಶದ ಸೆನ್ಸಾರ್ ಮಂಡಳಿಯಾಗಿರುವ ಚಲನಚಿತ್ರ ಪ್ರಮಾಣೀಕರಣದ ಕೇಂದ್ರ ಮಂಡಳಿಯ ಕಾರ್ಯದ ಮಧ್ಯೆ ನಾವು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮಹಾಕಾವ್ಯ ಆಧರಿಸಿದ ಈ ಚಿತ್ರ ರಜಪೂತ ರಾಣಿ ಹಾಗೂ ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿಯ ನಡುವಿನ ಸಂಬಂಧವನ್ನು ಹೇಳುತ್ತದೆ. ಈ ಚಲನಚಿತ್ರ ಡಿಸೆಂಬರ್ 1ರಂದು ಬಿಡುಗಡೆ ಆಗಬೇಕಿತ್ತು. ಆದರೆ, ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ.

ಚಿತ್ರವನ್ನು ಟೀಕಿಸಿರುವ ತೀವ್ರಗಾಮಿ ಗುಂಪಿನ ಸದಸ್ಯರು ಹಾಗೂ ಬಿಜೆಪಿ ಮುಸ್ಲಿಂ ಆಕ್ರಮಣಕಾರ ಹಾಗೂ ಹಿಂದೂ ರಾಣಿಯ ನಡುವಿನ ಪ್ರೇಮವನ್ನು ಚಿತ್ರಿಸಿ ಬನ್ಸಾಲಿ ಇತಿಹಾಸ ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಚಲನಚಿತ್ರ ಬಿಡುಗಡೆ ನಿಷೇಧಿಸಲಾಗಿದೆ.

ಸೂರಜ್ ಪಾಲ್ ಅಮುಗೆ ಶೋಕಾಸ್ ನೋಟಿಸ್ ಹೊಸದಿಲ್ಲಿ: ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟನಟಿಯರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಲೆಗೆ 10 ಕೋ. ರೂ. ಬಹುಮಾನ ಘೋಷಿಸಿರುವುದರಿಂದ ತೀವ್ರ ಮುಜುಗರಕ್ಕೀಡಾಗಿರುವ ಬಿಜೆಪಿ, ಹೇಳಿಕೆ ನೀಡಿದ ಪಕ್ಷದ ನಾಯಕನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದೆ.

ಈ ಹೇಳಿಕೆ ನೀಡುವಲ್ಲಿ ಪಕ್ಷದ ಪಾತ್ರವಿಲ್ಲ ಎಂದು ಹೇಳಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್, ಯಾರು ಕೂಡ ಇಂತಹ ಹೇಳಿಕೆ  ನೀಡಬಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News