ಭಿನ್ನಾಭಿಪ್ರಾಯ ಮರೆತು ಒಂದಾಗೋಣ: ಡಾ.ಹುಸೈನ್ ಮಡವೂರ್
ಮಂಗಳೂರು, ನ. 20: ಮುಸ್ಲಿಮರು ತಮ್ಮೊಳಗಿನ ಭಿನ್ನಾಪ್ರಾಯಗಳನ್ನು ಮರೆತು ಒಗ್ಗಟ್ಟಾದರೆ, ಇತರ ಧರ್ಮೀಯರ ಜತೆಗೂ ಸೌಹಾರ್ದದಿಂದ ಬಾಳಲು ಸಾಧ್ಯವಿದೆ ಎಂದು ಕೇರಳ ನದ್ವತ್ತುಲ್ ಮುಜಾಹಿದೀನ್‌ನ ಉಪಾಧ್ಯಕ್ಷ ಡಾ.ಹುಸೈನ್ ಮಡವೂರ್ ಹೇಳಿದ್ದಾರೆ.
ಕೇರಳ ನದ್ವತುಲ್ ಮುಜಾಹಿದೀನ್ ಸಂಘಟನೆಯ ವತಿಯಿಂದ ಕೇರಳದ ಮಲಪ್ಪುರಂ ಜಿಲ್ಲೆಯ ಕೂರಿಯಾಡ್‌ನಲ್ಲಿ ಡಿ.28ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಧರ್ಮ: ಸಹಿಷ್ಣುತೆ, ಸಹಬಾಳ್ವೆ, ಪ್ರೀತಿ’ ಸಮ್ಮೇಳನದ ಪ್ರಚಾರಾರ್ಥ ನಗರದ ನೆಹರೂ ಮೈದಾನದಲ್ಲಿ ಜರಗಿದ ‘ಪ್ರಚಾರ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ದೇವನು ಮಾನವ ಕುಲಕ್ಕೆ ಗಾಳಿ, ನೀರು, ಆಹಾರ ಸಹಿತ ಅಸಂಖ್ಯ ಅನುಗ್ರಹಗಳನ್ನು ಎಲ್ಲ ಧರ್ಮೀಯರಿಗೂ ಧರ್ಮದಲ್ಲಿ ನಂಬಿಕೆ ಇಲ್ಲದವರಿಗೂ ಕರುಣಿಸಿರುವಾಗ ನಾವು ನಮ್ಮೆಳಗೇ ಭೇದ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಡಾ.ಹುಸೈನ್ ಮಡವೂರ್, ದೇವರ, ಧರ್ಮದ ಹೆಸರಿನಲ್ಲಿ ಸಂಘರ್ಷಕ್ಕಿಳಿಯುವುದು ಸರಿಯಲ್ಲ ಎಂದರು.
ಇಸ್ಲಾಮ್ ಸಹಿತ ಜಗತ್ತಿನ ಎಲ್ಲ ಧರ್ಮಗಳೂ ಶಾಂತಿಯನ್ನು ಬೋಧಿಸುತ್ತದೆ. ಹೀಗಿದ್ದರೂ ಇಸ್ಲಾಂ, ಕ್ರೈಸ್ತ ಮತ್ತು ಬೌದ್ಧ ಧರ್ಮದ ಹೆಸರಿನಲ್ಲಿ ಜನಾಂಗೀಯ ಹತ್ಯೆಗಳು ನಡೆಯುತ್ತಿರುವುದು ದುರದೃಷ್ಟಕರ. ಶಾಂತಿ, ಸೌಹಾರ್ದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಇದು ಎಲ್ಲರ ಕರ್ತವ್ಯವೂ ಆಗಿದೆ. ಶಾಂತಿಯಿಂದ ಮಾತ್ರ ಸಾಮಾಜಿಕ ನೆಮ್ಮತಿ ಸಾಧ್ಯವಿದೆ ಎಂದು ಡಾ.ಹುಸೈನ್ ಮಡವೂರ್ ಹೇಳಿದರು.
ಎಸ್‌ಕೆಎಸ್‌ಎಂನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಕೆಎನ್‌ಎಂ ರಾಜ್ಯಾಧ್ಯಕ್ಷ ಟಿ.ಪಿ. ಅಬ್ದುಲ್ಲ ಕೋಯ ಮದನಿ, ಕೇರಳ ನಜಾತುಲ್ ಅನಾಮ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಅಲಿ ಶಾಕಿರ್ ಮಂಡೇರಿ, ಕೇರಳದ ಯುವ ವಾಗ್ಮಿ ಅಬ್ದುಶ್ಶುಕೂರ್ ಸ್ವಲಾಹಿ, ಕೇರಳದ ಐಎಸ್‌ಎಂ ಅಧ್ಯಕ್ಷ ಡಾ. ಅಬ್ದುಲ್ ಮಜೀದ್ ಸ್ವಲಾಹಿ, ಮಂಗಳೂರು ಸಲಫಿ ಎಜುಕೇಶನ್ ಬೋರ್ಡ್ ಅಧ್ಯಕ್ಷ ಮುಸ್ತಾ ದಾರಿಮಿ, ಬಳ್ಳಾರಿಯ ಇಸ್ಲಾಮಿಕ್ ದಾವಾ ಗೈಡೆನ್ಸ್ ಆ್ಯಂಡ್ ಸರ್ವಿಸಸ್ ಕಾರ್ಯದರ್ಶಿ ಮುಹಮ್ಮದ್ , ಬೆಂಗಳೂರಿನ ಸನಾಬಿಲ್ ಅರೆಬಿಕ್ ಕಾಲೇಜಿನ ಸ್ಥಾಪಕ ಖಲೀಲುರ್ರಹ್ಮಾನ್ ಮದನಿ ಮಾತನಾಡಿದರು.ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಬಶೀರ್ ಅಹ್ಮದ್ ಶಾಲಿಮಾರ್, ಸಿ.ಪಿ.ಅಬ್ದುಲ್ , ಇಲ್ಯಾಸ್ ಅಡ್ವೊಕೇಟ್, ಅಲಿ ಉಮರ್, ಯು.ಎ.ಖಾಸಿಂ ಉಳ್ಳಾಲ, ಶಕಿರ್ ಕುಂಜತ್ತಬೈಲ್ ಉಪಸ್ಥಿತರಿದ್ದರು.
ನೌಶಾದ್ ಇಬ್ರಾಹಿಂ ಸ್ವಾಗತಿಸಿದರು. ಯಾಕೂಬ್ ಕಲ್ಲರ್ಪೆ ವಂದಿಸಿದರು. ಆತಿಷ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.