ಆರ್‌ಟಿಐ ಅರ್ಜಿದಾರನಿಗೆ ಸ್ಮೃತಿ ಇರಾನಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ: ಹೈಕೋರ್ಟ್ ಆದೇಶ

Update: 2017-11-20 15:26 GMT

ಹೊಸದಿಲ್ಲಿ,ನ.20: ಕೇಂದ್ರ ಸಚಿವೆ ಸ್ಮತಿ ಇರಾನಿಯವರ 10 ಮತ್ತು 12ನೇ ತರಗತಿಗಳ ದಾಖಲೆಗಳ ಕುರಿತು ಆರ್‌ಟಿಐ ಅರ್ಜಿದಾರ ಮುಹಮ್ಮದ್ ನೌಷಾದುದ್ದೀನ್ ಅವರಿಗೆ ಮಾಹಿತಿ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಸಿಬಿಎಸ್‌ಇಗೆ ನಿರ್ದೇಶ ನೀಡಿದೆ. ಇಲ್ಲದಿದ್ದರೆ ಇರಾನಿಯವರ ಶೈಕ್ಷಣಿಕ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಿರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಆದೇಶದ ವಿರುದ್ಧದ ತಡೆಯಾಜ್ಞೆಯ ಸೌಲಭ್ಯವನ್ನು ಅದು(ಸಿಬಿಎಸ್‌ಇ) ಅನುಭವಿಸು ವಂತಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸಿಐಸಿಯ ಆದೇಶದ ವಿರುದ್ಧ ಸಿಬಿಎಸ್‌ಇ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿ ದೆಯೇ ಅಥವಾ ಆದೇಶಕ್ಕೆ ತಡೆಯಾಜ್ಞೆ ಲಭಿಸಿದೆಯೇ ಎನ್ನುವುದನ್ನು ಇರಾನಿಯವರ ಶಾಲಾ ದಾಖಲೆಗಳ ಕುರಿತು ಮಾಹಿತಿಯನ್ನು ಕೋರಿರುವ ಅರ್ಜಿದಾರರಿಗೆ ಇನ್ನೂ ತಿಳಿಸಿರದ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ನಿರ್ದೇಶ ಹೊರಬಿದ್ದಿದೆ.

ನೌಷಾದುದ್ದೀನ್ ಅವರಿಗೆ ಹೊಸದಾಗಿ ನೋಟಿಸ್‌ನ್ನು ಹೊರಡಿಸಿದ ನ್ಯಾಯಾಲಯವು ಅವರಿಗೆ ಮಾಹಿತಿಯನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸಿಬಿಎಸ್‌ಇಗೆ ಆದೇಶಿಸಿತು. ಇಲ್ಲದಿದ್ದರೆ ಈ ವರ್ಷದ ಫೆ.21ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿತು.

ಥರ್ಡ್ ಪಾರ್ಟಿ ಮಾಹಿತಿಯಾಗಿರುವುದರಿಂದ ಆರ್‌ಟಿಐ ಕಾಯ್ದೆಯಡಿ ಇರಾನಿ ಯವರ ಶಾಲಾ ದಾಖಲೆಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂಬ ಕಾರಣವನ್ನೊಡ್ಡಿ ಸಿಬಿಎಸ್‌ಇ ಸಿಐಸಿಯ ಈ ವರ್ಷದ ಜ.17ರ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

ಇರಾನಿಯವರ ಶಾಲಾ ದಾಖಲೆಗಳನ್ನು ಪರಿಶೀಲಿಸಲು ತನ್ನ ಜ.17ರ ಆದೇಶದಲ್ಲಿ ನೌಷಾದುದ್ದೀನ್‌ಗೆ ಅವಕಾಶ ಕಲ್ಪಿಸಿದ್ದ ಸಿಐಸಿ, ಅವರು ಕೋರಿದ್ದ ಮಾಹಿತಿಗಳು ‘ವೈಯಕ್ತಿಕ’ವಾಗಿವೆ ಎಂಬ ಸಿಬಿಎಸ್‌ಇ ವಾದವನ್ನು ತಿರಸ್ಕರಿಸಿತ್ತು.

ಜನ ಪ್ರತಿನಿಧಿಗಳು ತಮ್ಮ ವಿದ್ಯಾರ್ಹತೆಗಳನ್ನು ಘೋಷಿಸಿದಾಗ ಅದನ್ನು ಪರಿಶೀಲಿಸಲು ಮತದಾರರಿಗೆ ಹಕ್ಕು ಇದೆ ಎಂದು ಸಿಐಸಿ ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News