ಬ್ಲೂವೇಲ್ ನಿಷೇಧದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಹೇಳಿದ್ದು ಹೀಗೆ…
ಹೊಸದಿಲ್ಲಿ, ನ. 20: ಆ್ಯಪ್ ಆಧರಿತ ಆಟ ಅಲ್ಲದೇ ಇರುವುದರಿಂದ ಬ್ಲೂವೇಲ್ ಚಾಲೆಂಜ್‌ನಂತಹ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಅಪಾಯಕಾರಿ ಆಟದ ಬಗ್ಗೆ ವಿದ್ಯಾರ್ಥಿಗಳ ನಡುವೆ ಜಾಗೃತಿ ಮೂಡಿಸಿ ಎಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ರಶ್ಯದಲ್ಲಿ 130 ಯುವಕರ ಸಾವಿಗೆ ಈ ಆಟ ಕಾರಣವಾಗಿದೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಬ್ಲೂವೇಲ್ ಚಾಲೆಂಜ್ ಕುಖ್ಯಾತಿ ಗಳಿಸಿತ್ತು.
ಇಂತಹ ಹಿಂಸಾತ್ಮಕ ಆಟಗಳನ್ನು ತಡೆ ಹಿಡಿಯುವಂತೆ ಕೋರಿ ಸಲ್ಲಿಸಲಾದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿತ್ತು. ಜೀವಕ್ಕೆ ಬೆದರಿಕೆ ಒಡ್ಡುವ ಆನ್‌ಲೈನ್ ಆಟ ತಡೆಯಲು ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯೊಂದನ್ನು ರೂಪಿಸಿದ ಒಂದು ದಿನದ ಬಳಿಕ ಸರಕಾರದ ಪ್ರತಿಕ್ರಿಯೆ ನೀಡಿದೆ. ನ್ಯಾಯವಾದಿ ಹಾಗೂ ಹೋರಾಟಗಾರ್ತಿ ಸ್ನೇಹಾ ಕಾಲಿಟಾ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಈ ಮನವಿ ಸಲ್ಲಿಸಿದ್ದರು.
ಈ ಬ್ಲೂವೇಲ್ ಚಾಲೆಂಜ್ ಅನ್ನು ಆತ್ಮಹತ್ಯೆ ಆಟ ಎಂದು ಕರೆಯಲಾಗುತ್ತಿದೆ. ಇದು ಹಾಡು ಕೇಳುವುದು, ಸ್ವ ಹಾನಿ ಮಾಡಿಕೊಳ್ಳುವುದು ಸೇರಿದಂತೆ ಸರಣಿ ಸವಾಲುಗಳನ್ನು ಎದುರಿಸುವಂತೆ ಯುವಕರನ್ನು ಉತ್ತೇಜಿಸುತ್ತದೆ ಹಾಗೂ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.
ಬ್ಲೂವೇಲ್ ಚಾಲೆಂಜ್ ಅನ್ನು ಈ ಹಿಂದೆ ರಾಷ್ಟ್ರೀಯ ಸಮಸ್ಯೆ ಎಂದು ವ್ಯಾಖ್ಯಾನಿಸಿದ್ದ ಸುಪ್ರೀಂ ಕೋರ್ಟ್, ಈ ಆಟದ ಬಗ್ಗೆ ಪ್ರೈಮ್ ಟೈಮ್‌ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿ ಜಾಗೃತಿ ಮೂಡಿಸುವಂತೆ ರಾಜ್ಯ ಸ್ವಾಮ್ಯದ ದೂರದರ್ಶನ ಹಾಗೂ ಖಾಸಗಿ ವಾಹಿನಿಗಳಿಗೆ ನಿರ್ದೇಶನ ನೀಡಿತ್ತು.