ಚಂಬರಿಕ ಖಾಝಿ ನಿಗೂಢ ಮೃತ್ಯು ಪ್ರಕರಣ: ತನಿಖೆಗೆ ಒತ್ತಾಯಿಸಿ ಪಿ ಡಿ ಪಿ ಯಿಂದ ಮುತ್ತಿಗೆ
ಕಾಸರಗೋಡು, ನ. 20: ಮಂಗಳೂರು -ಚಂಬರಿಕ ಖಾಝಿಯಾಗಿದ್ದ ಸಿಎಂ ಅಬ್ದುಲ್ಲ ಮೌಲವಿ ಅವರ ನಿಗೂಢ ಸಾವಿನ ಕುರಿತು ಎನ್ ಐ ಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪಿ ಡಿ ಪಿ ಜಿಲ್ಲಾ ಸಮಿತಿ ಸೋಮವಾರ ಕಾಸರಗೋಡು ಬಿ ಎಸ್ ಎನ್ ಎಲ್ ಟೆಲಿಕಾಂ ಭವನಕ್ಕೆ ಮುತ್ತಿಗೆ ಹಾಕಿತು.
ಹೊಸ ಬಸ್ ನಿಲ್ದಾಣ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿದರು. ಬಳಿಕ ನಡೆದ ಪ್ರತಿಭಟನೆಯನ್ನು ಪಿ ಡಿ ಪಿ ಮುಖಂಡ ಸ್ವಾಮಿ ವರ್ಕಲ ರಾಜ್ ಉದ್ಘಾಟಿಸಿದರು. ಮೌಲವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಮುಚ್ಚಿ ಹಾಕಲು ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿದ್ದಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದರು.
ಎಸ್ . ಎಂ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ನಿಸಾರ್ ಮೆತ್ತರ್, ಗೋಪಿ ಕುದ್ರೆಕ್ಕಲ್ , ಯೂನಸ್ ತಳಂಗರೆ , ಅಬ್ದುಲ್ ರಹಮಾನ್ ತೆರುವತ್, ಎಂ .ಕೆ ಇ ಅಬ್ಬಾಸ್ , ಅಝೀಝ್ ಶೇಣಿ, ಫಾರೂಕ್ ತಂಙಲ್, ಉಬೈದ್ ಮುಟ್ಟತಲ, ಮುಹಮ್ಮದ್ ಸಖಾಫಿ ತಂಙಲ್ , ಹುಸೈನಾರ್ ಬೆಂಡಿಚ್ಚಾಲ್ ಮೊದಲಾದವರು ಉಪಸ್ಥಿತರಿದ್ದರು.