ಅಯೋಧ್ಯೆ- ಫೈಝಾಬಾದ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ

Update: 2017-11-20 16:22 GMT

ಲಕ್ನೊ, ನ.20: ಉತ್ತರಪ್ರದೇಶದ ಅವಳಿ ನಗರವಾದ ಫೈಝಾಬಾದ್ ಅಯೋಧ್ಯೆ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಫೈಝಾಬಾದ್‌ನಲ್ಲಿರುವ 45 ವಾರ್ಡ್‌ಗಳ ಪೈಕಿ ರಾಮ್‌ಪ್ರಸಾದ್ ಬಿಸ್ಮಿಲ್ ವಾರ್ಡ್‌ನ ಅಭ್ಯರ್ಥಿಯಾಗಿ ಬಿಜೆಪಿಯ ಜಿಲ್ಲಾ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಝೀಶನ್ ಮೆಹಿಂದಿ ಅವರನ್ನು ಕಣಕ್ಕಿಳಿಸಿದೆ. ಅಯೋಧ್ಯೆ ವಾರ್ಡ್‌ನಲ್ಲಿ 15 ವಾರ್ಡ್‌ಗಳಿವೆ. ಬಿಜೆಪಿ ಅವಳಿನಗರದ ಒಟ್ಟು 60 ವಾರ್ಡ್‌ಗಳ ಪೈಕಿ ಕೇವಲ 1ರಲ್ಲಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಿದ್ದರೂ, ಬಿಜೆಪಿಯ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಆಶಯಕ್ಕೆ ಇದು ಪೂರಕವಾಗಿದೆ ಎನ್ನಲಾಗುತ್ತಿದೆ. ಝೀಶನ್ ಶೇ.8ರಷ್ಟಿರುವ ಶಿಯಾ ಪ್ರತಿನಿಧಿಯಾಗಿದ್ದು, ತ್ರಿವಳಿ ತಲಾಖ್ ನಿಷೇಧಿಸುವ ಬಿಜೆಪಿಯ ಕ್ರಮವನ್ನು ಶಿಯಾ ಮುಸ್ಲಿಮರು ಬೆಂಬಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

2014ರ ಲೋಕಸಭಾ ಚುನಾವಣೆ ಹಾಗೂ 2017ರ ಉ.ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡದಿರುವ ಬಿಜೆಪಿ ಕ್ರಮಕ್ಕೆ ಭಾರೀ ಟೀಕೆ ಎದುರಾಗಿತ್ತು. ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ನಮಗೆ ಒಳ್ಳೆಯ ಪ್ರಚಾರ ಸಿಕ್ಕಿದೆ. ಉ.ಪ್ರದೇಶದ ನಗರಪಾಲಿಕೆ ಚುನಾವಣೆ ಹಾಗೂ ಅಯೋಧ್ಯೆಯ ದೃಷ್ಟಿಯಿಂದ ಇದೊಂದು ಉತ್ತಮ ಕ್ರಮವಾಗಿದೆ ಎಂದು ಬಿಜೆಪಿಯ ಮುಖಂಡರೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News