×
Ad

ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಕೌಶಲ್ಯಾಭಿವೃದ್ಧಿ ಅಗತ್ಯ: ರವಿರಾಜ ಹೆಗ್ಡೆ

Update: 2017-11-20 22:13 IST

ಉಡುಪಿ, ನ. 20: ಯಾವುದೇ ಸಹಕಾರಿ ಸಂಸ್ಥೆ ಸಕ್ರೀಯವಾಗಿ ಕಾರ್ಯ ನಿರ್ವಹಿಸಲು ಸಂಘದ ಕೌಶಲ್ಯಗಳ ಅಭಿವೃದ್ದಿ ಆಗಲೇ ಬೇಕಿದೆ.ಮಾನವ ಸಂಪನ್ಮೂಲಗಳ ಸದ್ಭಳಕೆಗೆ ವಿವಿಧ ತರಬೇತಿಗಳ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣ ದಲ್ಲಿ ಸೋಮವಾರ ನಡೆದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಹಕಾರಿ ಸಂಸ್ಥೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಮಾತ್ರ ಗ್ರಾಹಕರಿಗೆ ಉತ್ತಮ ಹಾಗೂ ತ್ವರಿತಗತಿಯ ಸೇವೆ ಒದಗಿಸಲು ಸಾಧ್ಯವಿದೆ. ಇದರೊಂದಿಗೆ ತಂತ್ರಜ್ಞಾನದ ಅಳವಡಿಕೆಯೂ ಅತೀಮುಖ್ಯವಾಗಿದೆ ಎಂದವರು ತಿಳಿಸಿದರು.

ನಮ್ಮ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮೂಲಕ ತಂತ್ರಜ್ಞಾನದ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುತಿದೆ. ಶೀಘ್ರದಲ್ಲೇ ಆ್ಯಪ್ ಮೂಲಕ ಇಂಡೆಂಟ್ ಕೊಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಅಲ್ಲದೇ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ಒಕ್ಕೂಟದ ಸದಸ್ಯರು ಶೇ.98ರಷ್ಟು ಮಂದಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ ಲಿಂಕ್ ಮಾಡಿದ್ದು, ಶೇ.2ರಷ್ಟು ಮಂದಿ ಉಳಿದುಕೊಂಡಿದ್ದಾರೆ. ಇದರಿಂದ ಸರಕಾರದ ಸಹಾಯಧನ ನೇರವಾಗಿ ಒಕ್ಕೂಟದ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಮಾತನಾಡಿ, ಸಹಕಾರಿ ಸಂಸ್ಥೆಗಳ ಯಶಸ್ಸು ಪಾರದರ್ಶಕ ಆಡಳಿತ ಹಾಗೂ ವಿಶ್ವಾಸಾರ್ಹತೆಯ ಮೇಲೆ ನಿಂತಿದೆ. ಇದರಿಂದ ಸಂಘದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಒಕ್ಕೂಟವು ಕ್ಲೌಡ್‌ಬೇಸಡ್ ತಂತ್ರಜ್ಞಾನದ ಮೂಲಕ ಹೈನುಗಾರಿಕೆ ಮಾಡುವ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಇತ್ತೀಚೆಗೆ ರಾಷ್ಟ್ರೀಯ ಡೈರಿ ಎಕ್ಸಲೆನ್ಸಿ ಪ್ರಶಸ್ತಿಯನ್ನು ಪಡೆದಿರುವುದಕ್ಕಾಗಿ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಇವರನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಚಂದ್ರಪ್ರತಿಮಾ ಎಂ.ಜೆ. ಮಾತನಾಡಿದರು. ಕೋಟೇಶ್ವರ ಸರಕಾರಿ ಪ್ರಥಂ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜೇಂದ್ರ ನಾಯಕ್ ದಿಕ್ಸೂಚಿ ಭಾಷಣ ಮಾಡಿದರು.

ವೇದಿಕೆಯಲ್ಲಿ ಕೋಶಾಧಿಕಾರಿ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಕೆ.ಸುರೇಶ್ ರಾವ್, ಕೆ.ಕೊರಗ ಪೂಜಾರಿ, ಒಕ್ಕೂಟದ ವ್ಯವಸ್ಥಾಪಕರಾದ ಹದ್ದೂರು ರಾಜೀವ್ ಶೆಟ್ಟಿ, ಜಾನಕಿ ಹಂದೆ, ಟಿ.ಸೂರ್ಯ ಶೆಟ್ಟಿ, ನವೀನಚಂದ್ರ ಜೈನ್, ಉದಯ ಕೆ. ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಪುತ್ತೂರಿನ ನಾರಾಯಣ ಪ್ರಕಾಶ್, ಎನ್.ವೀಣಾ ಶೆಣೈ, ಅಲ್ಲದೇ ಕಾರ್ಕಳ ಸುಧೀರ್ ಕುಮಾರ್, ಸುಚರಿತ ಶೆಟ್ಟಿ ಉಪಸ್ಥಿತರಿದ್ದರು.

ಸಹಕಾರಿ ಯೂನಿಯನ್‌ನ ನಿರ್ದೇಶಕ ಅಶೋಕ ಕುಮಾರ್‌ಶೆಟ್ಟಿ ಸ್ವಾಗತಿಸಿದರೆ, ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News