‘ಗಿವಿಂಗ್ ಪ್ಲೆಡ್ಜ್ ’ ಅಭಿಯಾನಕ್ಕೆ ಕೈಜೋಡಿಸಿದ ನಿಲೇಕಣಿ ದಂಪತಿ

Update: 2017-11-20 16:48 GMT

ಹೊಸದಿಲ್ಲಿ, ನ.20: ತಮ್ಮಲ್ಲಿರುವ ಸಂಪತ್ತಿನ ಅರ್ಧಾಂಶವನ್ನು ಪರೋಪಕಾರಕ್ಕೆ ದಾನ ಮಾಡುವ ‘ದಿ ಗಿವಿಂಗ್ ಪ್ಲೆಡ್ಜ್’ ಅಭಿಯಾನದಲ್ಲಿ ಇನ್‌ಫೋಸಿಸ್ ಸಹಸಂಸ್ಥಾಪಕ ಹಾಗೂ ಬಿಲಿಯಾಧಿಪತಿ ನಂದನ್ ನಿಲೇಕಣಿ ಮತ್ತವರ ಪತ್ನಿ ರೋಹಿಣಿ ನಿಲೇಕಣಿ ಕೈಜೋಡಿಸಿದ್ದಾರೆ.

ಅಭಿಯಾನದಲ್ಲಿ ಕೈಜೋಡಿಸಿರುವ ಬಗ್ಗೆ ನಿಲೇಕಣಿ ಮತ್ತವರ ಪತ್ನಿ ಸಹಿ ಹಾಕಿರುವ ಪತ್ರವನ್ನು ವಿಶ್ವದ ಶ್ರೀಮಂತ ವ್ಯಕ್ತಿಗಳನ್ನು ಒಳಗೊಂಡಿರುವ ಈ ಪ್ರತಿಷ್ಠಿತ ಜಾಲಬಂಧದಲ್ಲಿ ಪ್ರಕಟಿಸಲಾಗಿದೆ.

  “ಕರ್ಮ ಮಾಡುವುದಷ್ಟೇ ನಮ್ಮ ಕೆಲಸ, ಅದರ ಪ್ರತಿಫಲವನ್ನು ಅಪೇಕ್ಷಿಸುವುದಲ್ಲ. ನಾವು ಮಾಡುವ ಕಾರ್ಯದಿಂದ ನಮಗೆ ಪ್ರತ್ಯಕ್ಷವಾಗಿ ಏನೂ ಪ್ರತಿಫಲ ದೊರಕದು ಎಂಬ ಹೆದರಿಕೆಯಿಂದ ಕೆಲಸ ಮಾಡದೇ ನಿಷ್ಕ್ರಿಯನಾಗಿರಬಾರದು ಎಂದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಇದರಿಂದ ಪ್ರೇರಣೆಗೊಂಡು ನಾವು ಈ ಅಭಿಯಾನದಲ್ಲಿ ಕೈಜೋಡಿಸಿದ್ದೇವೆ. ಇಂತಹ ಒಂದು ಅಪೂರ್ವ ಅವಕಾಶ ಮಾಡಿಕೊಟ್ಟಿರುವುದಕ್ಕೆ ಬಿಲ್ ಮತ್ತು ಮೆಲಿಂಡರಿಗೆ ಅಭಿನಂದನೆಗಳು” ಎಂದು ಪತ್ರದಲ್ಲಿ ತಿಳಿಸಲಾಗಿದೆ.

 ಬಳಿಕ ಬಿಲ್‌ಗೇಟ್ಸ್ ತಮ್ಮ ಟ್ವಿಟರ್ ಬರಹದಲ್ಲಿ ನೀಲೆಕಣಿ ದಂಪತಿಯನ್ನು ಶ್ಲಾಘಿಸಿದ್ದಾರೆ. ಫೋರ್ಬ್ಸ್ ಬಿಡುಗಡೆಮಾಡಿರುವ ವರದಿಯಲ್ಲಿ ನಿಲೇಕಣಿಯ ಒಟ್ಟು ಸಂಪತ್ತು 1.7 ಬಿಲಿಯನ್ ಡಾಲರ್ ಎಂದು ಉಲ್ಲೇಖಿಸಲಾಗಿದೆ. ಇನ್‌ಫೋಸಿಸ್‌ನ ಸಿಇಒ ಸಿಕ್ಕಾ ಪದತ್ಯಾಗದ ಬಳಿಕ ನಿಲೇಕಣಿ ಮತ್ತೆ ಇನ್‌ಫೋಸಿಸ್‌ಗೆ ಮರಳಿದ್ದು ಕಾರ್ಯನಿರ್ವಹಣೆ ರಹಿತ ಅಧ್ಯಕ್ಷರಾಗಿದ್ದಾರೆ. ಇವರ ಪತ್ನಿ ರೋಹಿಣಿ ಶುದ್ಧ ನೀರು ಪೂರೈಕೆಯ ಉದ್ದೇಶದಿಂದ ಆರಂಭಿಸಲಾಗಿರುವ ‘ಅರ್ಘ್ಯಂ’ ಅಭಿಯಾನದ ಸ್ಥಾಪಕರಾಗಿದ್ದಾರೆ.

  ವಿಪ್ರೊ ಅಧ್ಯಕ್ಷ ಅಝೀಮ್ ಪ್ರೇಮ್‌ಜಿ, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜೂಮ್ದಾರ್ ಮತ್ತು ಶೋಭಾ ಡೆವಲಪರ್ಸ್‌ನ ಅಧ್ಯಕ್ಷ ಎಮರ್ಶಿಯಸ್ ಪಿಎನ್‌ಸಿ ಮೆನನ್ ಅವರು ಈ ಹಿಂದೆಯೇ ಈ ಅಭಿಯಾನಕ್ಕೆ ಕೈಜೋಡಿಸಿರುವ ಭಾರತೀಯರಾಗಿದ್ದಾರೆ. ಈ ಅಭಿಯಾನದಲ್ಲಿ 21 ದೇಶಗಳ 171 ದಾನಿಗಳು ಸೇರಿದ್ದಾರೆ. ಬಿಲ್‌ಗೇಟ್ಸ್, ಮೆಲಿಂಡ ಗೇಟ್ಸ್ ಮತ್ತು ವಾರೆನ್ ಬಫೆಟ್ ಅವರು 2010ರ ಆಗಸ್ಟ್‌ನಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News