ಜಿಇಎಸ್ ಶೃಂಗಸಭೆಯಿಂದ ಹಿಂದೆ ಸರಿದ ದೀಪಿಕಾ ಪಡುಕೋಣೆ

Update: 2017-11-20 17:11 GMT

ಹೈದರಾಬಾದ್, ನ.20: ‘ಪದ್ಮಾವತಿ’ ಸಿನೆಮಾದ ಕುರಿತ ವಿವಾದದ ಬಳಿಕ ಸತತ ಬೆದರಿಕೆ ಎದುರಿಸುತ್ತಿರುವ ನಟಿ ದೀಪಿಕಾ ಪಡುಕೋಣೆ, ಇದೀಗ ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಭಾಗವಹಿಸುತ್ತಿರುವ ಜಾಗತಿಕ ಉದ್ಯಮಶೀಲತಾ ಶೃಂಗಸಭೆ(ಜಿಇಎಸ್)ಯಿಂದ ಹಿಂದೆ ಸರಿದಿದ್ದಾರೆ. ಈ ಸಭೆಯಲ್ಲಿ ‘ಹಾಲಿವುಡ್‌ನಿಂದ ನಾಲಿವುಡ್, ಬಾಲಿವುಡ್‌ಗೆ - ಸಿನೆಮ ನಿರ್ಮಾಣ ನಡೆದು ಬಂದ ದಾರಿ’ ಎಂಬ ವಿಷಯದಲ್ಲಿ ದೀಪಿಕಾ ಭಾಷಣ ಮಾಡಬೇಕಿತ್ತು. ಆದರೆ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು ತೆಲಂಗಾಣ ಸರಕಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ನೈಜೀರಿಯದ ಸಿನೆಮ ಉದ್ಯಮವನ್ನು ‘ನಾಲಿವುಡ್’ ಎಂದು ಕರೆಯಲಾಗುತ್ತದೆ.

 ಭಾರತ ಮತ್ತು ಅಮೆರಿಕ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲಾದ ಜಿಇಎಸ್, ‘ಮಹಿಳೆ ಮೊದಲು, ವಿಕಾಸ ಸರ್ವರಿಗೂ ’ ಎಂಬ ಧ್ಯೇಯವಾಕ್ಯದಡಿ ನಡೆಯಲಿದೆ. ಎರಡೂವರೆ ದಿನ ನಡೆಯಲಿರುವ ಈ ತರಬೇತಿ ಹಾಗೂ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ವಿಶ್ವದ ಸುಮಾರು 1,500 ಉದ್ಯಮಿಗಳು, ಹೂಡಿಕೆದಾರರು ಹಾಗೂ ಪರಿಸರ ವ್ಯವಸ್ಥೆಯ ಸಮರ್ಥಕರು ಪಾಲ್ಗೊಳ್ಳಲಿದ್ದಾರೆ. ನವೆಂಬರ್ 28ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ಇವಾಂಕ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News