ಸೌದಿಅರೇಬಿಯ: ಸಂಕಷ್ಟದಲ್ಲಿ ವಾಮಂಜೂರು ಮಹಿಳೆ, ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ

Update: 2017-11-20 17:17 GMT

ಮಂಗಳೂರು, ನ. 20: ಅನಾರೋಗ್ಯಪೀಡಿತ ಪತಿ ಮತ್ತು ಮಗನ ವಿದ್ಯಾಭ್ಯಾಸದ ಜವಾಬ್ಧಾರಿಯನ್ನು ಹೊರಲು ವಿದೇಶ ಉದ್ಯೋಗಕ್ಕೆ ತೆರಳಿದ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿರುವ ಘಟನೆಯೊಂದು ಮಂಗಳೂರು ಸಮೀಪದ ವಾಮಂಜೂರಿನಿಂದ ವರದಿಯಾಗಿದೆ.

ವಾಮಂಜೂರಿನ ಕೆಳರೈ ಕೋಡಿ ಎರಡನೇ ಬ್ಲಾಕಿನ ನಿವಾಸಿ ಬಾಲಪ್ಪ ಬಾಲಕೃಷ್ಣ (55) ಎಂಬವರ ಪತ್ನಿ ವಿಜಯಾ (43) ಎಂಬವರೇ ಸೌದಿ ಅರೇಬಿಯದಲ್ಲಿ ಸಂಕಷ್ಟಕ್ಕೀಡಾ ಗಿರುವ ಮಹಿಳೆ. ಹಲವು ತಿಂಗಳಿನಿಂದ ಸರಿಯಾಗಿ ಫೋನ್ ಸಂಪರ್ಕಕ್ಕೆ ಸಿಗದೆ, ಊರಿಗೆ ಮರಳಲು ಸಾಧ್ಯವಾಗದೆ ಸೌದಿ ಅರೇಬಿಯದ ದಮಾಮ್ ಎಂಬ ನಗರದಲ್ಲಿ ಗೃಹ ಬಂಧನದಲ್ಲಿರುವ ಬಗ್ಗೆ ವರದಿಯಾಗಿದೆ. ವಿಜಯಾ ಅವರ ಬಿಡುಗಡೆಯ ನಿರೀಕ್ಷೆಯಲ್ಲಿ ವೃದ್ಧ ಪತಿ ಮತ್ತು ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಮಗ ಜಗಜೀವನ್ ದಿನ ದೂಡುತ್ತಿದ್ದಾರೆ. ತೀರಾ ಬಡಕುಟುಂಬಕ್ಕೆ ವಿಜಯಾ ಅವರೇ ಆಧಾರಸ್ತಂಭವಾಗಿದ್ದರು.

2015ರ ಜುಲೈ 15ರಂದು ಬಜ್ಪೆಯ ಮಹಿಳೆಯೋರ್ವರ ಪರಿಚಯದ ಮೂಲಕ ಸೌದಿ ಅರೇಬಿಯಕ್ಕೆ ಮನೆಗೆಲಸದ ಉದ್ಯೋಗಕ್ಕೆಂದು  ವಿಜಯಾ ತೆರಳಿದ್ದರು. ಕೆಲವು ತಿಂಗಳು ಮಾತ್ರ ಫೋನ್ ಸಂಪರ್ಕದಲ್ಲಿದ್ದ ವಿಜಯಾ ಅನಂತರದ ದಿನಗಳಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಸಂಪರ್ಕಕ್ಕೆ ಸಿಗುತ್ತಿದ್ದರು. ಯಾವಾಗಲಾದರೊಮ್ಮೆ ಹಣ ಕಳುಹಿಸಿಕೊಡುತ್ತಿದ್ದರು. ಆದರೆ ಎರಡು ವರ್ಷಗಳ ಬಳಿಕ ಪತಿಗೆ ವಿಪರೀತ ಅನಾರೋಗ್ಯದ ಕಾರಣ ಊರಿಗೆ ಮರಳಲು ಬಯಸಿದ ವಿಜಯಾರಿಗೆ ಸೌದಿ ಪ್ರಾಯೋಜಕನು ಸ್ಪಂದಿಸಲೇ ಇಲ್ಲ. ವಿಶೇಷವೆಂದರೆ ಇದುವರೆಗೆ ವಿಜಯಾ ಅವರಿಗೆ ಒಂದು ಮೊಬೈಲ್ ಸೌಲಭ್ಯವನ್ನೂ ಪ್ರಾಯೋಜಕನು ಒದಗಿಸಿಲ್ಲ. ಹೀಗಾಗಿ ವಿಜಯಾ ಅವರ ಪರಿಸ್ಥಿತಿ ತಿಳಿಯಲು ಅನಕ್ಷರಸ್ಥ ಬಾಲಕೃಷ್ಣ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಬಾಲಕೃಷ್ಣ ಅವರು ಊರಿನ ಪರಿಚಯದವರಿಗೆ ಈ ವಿಚಾರವನ್ನು ತಿಳಿಸಿದ್ದರು. ಮಾಹಿತಿ ಪಡೆದ ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರು ಸೌದಿ ಅರೇಬಿಯ ದಲ್ಲಿರುವ ಕರಾವಳಿಯ ಯುವಕರಿಗೆ ಮಾಹಿತಿ ನೀಡಿದ್ದು, ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಂಡಿಯನ್ ಸೋಶಿಯಲ್ ಫೋರಮ್ ವಿಜಯಾ ಪ್ರಕರಣವನ್ನು ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ರಿಯಾಝ್ ಅವರು ಇಂಡಿಯನ್ ಸೋಶಿಯಲ್ ಫೋರಮ್ ಗೆ ತಲುಪಿಸಿದ್ದು ಶೀಘ್ರದಲ್ಲೇ ವಿಜಯಾ ಅವರು ತವರಿಗೆ ಮರಳುವಂತಾಗಬಹುದು ಎಂಬ ವಿಶ್ವಾಸವನ್ನು ಇಂಡಿಯನ್ ಸೋಶಿಯಲ್ ಫೋರಮ್ ವ್ಯಕ್ತಪಡಿಸಿದೆ.

ಸೌದಿಗೆ ತೆರಳಿ 2 ವರ್ಷ ಕಳೆದಿದೆ; ಸಂಪರ್ಕದಲ್ಲಿಲ್ಲ: ಬಾಲಪ್ಪ

 ನನ್ನ ಪತ್ನಿ ವಿಜಯಾ ಅವರು ಮನೆಕೆಲಸಕ್ಕೆಂದು ಸೌದಿಗೆ ತೆರಳಿ 2 ವರ್ಷ 4 ತಿಂಗಳು ಕಳೆದಿವೆ. ಸೌದಿಗೆ ಹೋದಂದಿನಿಂದ ಕೇವಲ ನಾಲ್ಕು ಬಾರಿ ಮಾತ್ರ ಕರೆ ಮಾಡಿ ವಿಚಾರಿಸಿದ್ದಾರೆ. ಇದೀಗ ಅವರು ಮನೆಯವರ ಸಂಪರ್ಕದಲ್ಲಿಲ್ಲ ಎಂದು ಸೌದಿಯಲ್ಲಿ ಸಂಕಷ್ಟದಲ್ಲಿರುವ ವಿಜಯಾ ಅವರ ಪತಿ ಬಾಲಪ್ಪ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ತೀರಾ ಬಡತನ ಹಾಗೂ ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದನ್ನು ಮನಗಂಡು ಮನೆ ಕೆಲಸಕ್ಕೆಂದು ವಿಜಯಾ  ಸೌದಿಗೆ ತೆರಳಿದ್ದಾಳೆ. ಆದರೆ, ಅವಳು ಹೇಗಿದ್ದಾಳೆ, ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನಾನು ಕೆಲವು ಯುವಕರನ್ನು ಸಂಪರ್ಕಿಸಿದಾಗ ಅವರು ನನ್ನ ನೆರವಿಗೆ ಬಂದಿದ್ದು, ಊರಿಗೆ ಮರಳಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News