ಯಕ್ಷಗಾನದ ಅಭಿವೃದ್ಧಿಗೆ ಅಭಿರುಚಿ ಪೂರಕ: ಪ್ರೊ ವಿವೇಕ ರೈ

Update: 2017-11-20 17:30 GMT

ಮಂಗಳೂರು, ನ. 20: ಯಕ್ಷಗಾನದ ಪಾರಂಪರಿಕ ಮೌಲ್ಯ ಉಳಿದು, ಅಭಿವೃದ್ಧಿಯ ಕಡೆಗೆ ಸಾಗಲು ಅದರ ಬಗ್ಗೆ ಅಭಿರುಚಿ ಮೂಡಿಸುವ ಕೆಲಸವಾಗಬೇಕು. ನಿರಂತರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅದು ಸಾಧ್ಯ ಎಂದು ಹಿರಿಯ ವಿದ್ವಾಂಸ, ಹಂಪಿಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಬಿ.ಎ. ವಿವೇಕ ರೈ ಹೇಳಿದರು.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷಭಾರತಿ ಪುತ್ತೂರು ಇದರ ಸಹಯೋಗದೊಂದಿಗೆ ನಗರದ ಪುರಭವನದಲ್ಲಿ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ-2017ಪಂಚಮ ವರ್ಷದ ನುಡಿಹಬ್ಬ, ಸದಾಭಿವಂದನಂ, ಜೋಶಿ ವಾಗರ್ಥ ಸರಣಿ ಮತ್ತು ಸಂಸ್ಮರಣ ಸಪ್ತಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಭಾಕರ ಜೋಶಿಯವರ ಕೊರಳಾರವಿಮರ್ಶಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯಕ್ಷಗಾನಕ್ಕೆ ಈಗ ಸಮೃದ್ಧಿಯ ಕಾಲ. ಎಲ್ಲೆಡೆ ಆಟ-ಕೂಟಗಳು ನಡೆಯುತ್ತಲೇ ಇರುತ್ತವೆ. ಗಣ್ಯ-ಮಾನ್ಯ ಕಲಾವಿದರನ್ನು ಕಲೆ ಹಾಕಿ ಅವರ ಅರ್ಥವೈಭವವನ್ನು ಒಂದು ವಾರ ಪರ್ಯಂತ ರಸಿಕರಿಗೆ ಉಣ ಬಡಿಸುವುದು ನಿಜವಾಗಿಯೂ ಕನ್ನಡದ ನುಡಿಹಬ್ಬವೇ. ಇದರೊಂದಿಗೆ ಅವರಿಂದ ಸಾಧಕರನ್ನು ಸ್ಮರಿಸುವುದು ಸ್ತುತ್ಯಾರ್ಹಎಂದು ಅವರು ನುಡಿದರು. ಯಕ್ಷಗಾನಕ್ಕೊಂದು ವಿಶ್ವಕೋಶವನ್ನು ರಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಉದ್ಯಮಿಗಳು ಕೈ ಜೋಡಿಸಬೇಕುಎಂದವರು ಸಲಹೆ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಮಾತನಾಡಿ ‘ಕಲಾವಿದರನ್ನು ಕೇಂದ್ರವಾಗಿರಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಯಕ್ಷಗಾನದ ಏಳ್ಗೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಇದು ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆಎಂದು ಹೇಳಿದರು.

ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ

ಯಕ್ಷಾಂಗಣದ ತಾಳಮದ್ದಳೆ ಸಪ್ತಾಹಕ್ಕೆ ಐದು ವರ್ಷ ತುಂಬಿದ ಪ್ರಯುಕ್ತ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರವನ್ನು ಪ್ರದಾನ ಮಾಡಲಾಯ್ತು. ಹಿರಿಯ ಸಮಾಜ ಸೇವಕ, ಶಿಕ್ಷಣ, ಕ್ರೀಡೆ ಮತ್ತು ಉದ್ಯಮರಂಗಗಳ ಸಾಧಕರಾದ ಎ. ಸದಾನಂದ ಶಟ್ಟಿ ಅವರ ಎಪ್ಪತ್ತೈದನೇ ಸಂಭ್ರಮಾಚರಣೆ ಸಲುವಾಗಿ ಏರ್ಪಡಿಸಿದ

ಸದಾಭಿವಂದನಂ ಕಾರ್ಯಕ್ರಮದಲ್ಲಿ ರಾಜ್ಯೋತ್ಸವದ ಮೊದಲ ಪುರಸ್ಕಾರವನ್ನು ಅವರಿಗೆ ನೀಡಲಾಯ್ತ್ತು. ಈ ಸಂದರ್ಭದಲ್ಲಿ ಸದಾನಂದ ಶೆಟ್ಟಿ ಮತ್ತು ಮೈನಾ ಎಸ್. ಶೆಟ್ಟಿ ದಂಪತಿಯನ್ನು ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವಿತ್ತು ಮುತ್ತೈದೆಯರಿಂದ ಆರತಿ ಬೆಳೆಸಿ ಸನ್ಮಾನಿಸಲಾಯ್ತು. ಮುಥಾಯಿ ಅಸೋಸಿಯೇಶನ್ ಅದ್ಯಕ್ಷ ರಾಜಗೋಪಾಲ ರೈ ಅಭಿನಂದನಾ ಭಾಷಣ ಮಾಡಿದರು. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ಸನ್ಮಾನಪತ್ರ ವಾಚಿಸಿದರು

ಮಂಕುಡೆ ಸಂಸ್ಮರಣೆ
ಇದೇ ಸಂದರ್ಭದಲ್ಲಿ ಹಿರಿಯ ಸ್ತ್ರೀ ವೇಷಧಾರಿ ದಿ ಮಂಕುಡೆ ಸಂಜೀವ ಶೆಟ್ಟಿ ಅವರ ಸಂಸ್ಮರಣೆಯನ್ನು ನೆರವೇರಿಸಲಾಯ್ತು. ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿದರು. ಮಂಕುಡೆಯವರ ಪುತ್ರರಾದ ಮಂಕುಡೆ ಸತೀಶ್ ಶೆಟ್ಟಿ ಪರ್ತಿಪ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯ್ತು. ಡಾ. ಎಂ. ಪ್ರಭಾಕರ ಜೋಶಿ ಮತ್ತು ಸುಚೇತಾ ಜೋಶಿ ಅವರು ದೀಪ ಪ್ರಜ್ವಲಿಸಿ ಜೋಶಿ ವಾಗರ್ಥ ಸರಣಿಗೆ ಚಾಲನೆ ನೀಡಿದರು.

ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ ಎ.ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಲಬಾರ್ ಗೋಲ್ಡ್ ಮತ್ತು ಕರುಣಾ ಇನ್ ಫ್ರಾ-ಪ್ರಾಪರ್ಟಿ ಆಡಳಿತ ನಿರ್ದೇಶಕ ಕೆ.ಕರುಣಾಕರ, ಉದ್ಯಮಿ ಹರಿಕೃಷ್ಣ ಪುನರೂರು ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್ ಕಾಂಚನ್, ಉದ್ಯಮಿಗಳಾದ ಲಕ್ಷ್ಮಣ ಶೆಟ್ಟಿ ಕಾವೂರು, ಹೇಮಂತ ರೈ ಮನವಳಿಕೆಗುತ್ತು, ಸಿ.ಎಸ್.ಭಂಡಾರಿ, ಬೋಳಾರ ನಾರಾಯಣ ಶೆಟ್ಟಿ, ಯಕ್ಷ ಪ್ರತಿಷ್ಠಾನದ ಸಂಚಾಲಕ ಬೋಳಾರ ಕರುಣಾಕರ ಶೆಟ್ಟಿ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಅಡ್ಯಾರ್ ಪುರುಷೋತ್ತಮ ಭಂಡಾರಿ ಮತ್ತು ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಬಳಿಕ ಬಲಿಪ ಪ್ರಸಾದರ ಭಾಗವತಿಕೆಯಲ್ಲಿ ಕಾರ್ತಿಕೇಯಸಪ್ತಾಹದ ಮೊದಲ ತಾಳಮದ್ದಳೆ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News