ಪ್ರದ್ಯುಮ್ನ್ ಕೊಲೆ ಪ್ರಕರಣ : ಬಂಧಿತ ಬಸ್ ಕಂಡಕ್ಟರ್ ಗೆ ಜಾಮೀನು
ಹೊಸದಿಲ್ಲಿ : ಗುರುಗ್ರಾಮದ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸೆಪ್ಟೆಂಬರ್ 8ರಂದು ನಡೆದ ವಿದ್ಯಾರ್ಥಿ ಪ್ರದ್ಯುಮ್ನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಬಂಧಿಸಲ್ಪಟ್ಟಿದ್ದ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಗೆ ಇಲ್ಲಿನ ಸಿವಿಲ್ ನ್ಯಾಯಾಲಯವೊಂದು ಇಂದು ಜಾಮೀನು ಮಂಜೂರುಗೊಳಿಸಿದೆ.
ಬಾಲಕ ಶಾಲೆಯ ಶೌಚಾಲಯದಲ್ಲಿ ಕೊಲೆಯಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಅಶೋಕ್ ಕುಮಾರ್ ನನ್ನು ಬಂಧಿಸಲಾಗಿತ್ತಲ್ಲದೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆಂದೂ ಪೊಲೀಸರು ಹೇಳಿಕೊಂಡಿದ್ದರು.
ಆದರೆ ಇತ್ತೀಚೆಗೆ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡ ನಂತರ ರಯಾನ್ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕೊಲೆಗೆ ಸಂಬಂಧಿಸಿದಂತೆ ನವೆಂಬರ್ 8ರಂದು ಬಂಧಿಸಲಾಗಿತ್ತು. ಈ ಬೆಳವಣಿಗೆಯ ನಂತರ ಅಶೋಕ್ ಕುಮಾರ್ ನ ವಕೀಲರಾದ ಮೋಹಿತ್ ವರ್ಮ ಜಾಮೀನು ಅರ್ಜಿ ಸಲ್ಲಿಸಿದ್ದರು. ಸಿಬಿಐಗೆ ಕುಮಾರ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದೇ ಇರುವುದರಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದರು.
ಮೇಲಾಗಿ ಬಂಧಿತ 11ನೇ ತರಗತಿ ವಿದ್ಯಾರ್ಥಿ ತನ್ನ ತಪ್ಪನ್ನು ಒಪ್ಪಿಕೊಂಡಿರುವುದರಿಂದ ಹಾಗೂ ಕೊಲೆಗೆ ಕಾರಣವನ್ನೂ ಸಿಬಿಐ ದೃಢಪಡಿಸಿರುವುದರಿಂದ ಅಶೋಕ್ ಜಾಮೀನಿಗೆ ಅರ್ಹನೆಂದು ಆತನ ವಕೀಲರು ವಾದಿಸಿದ್ದರು.
ಆದರೆ ಕುಮಾರ್ ನಿರಪರಾಧಿ ಎಂದು ಹೇಳಿಕೊಳ್ಳುವಷ್ಟು ಪ್ರಕರಣದ ವಿಚಾರಣೆ ಮುಂದಕ್ಕೆ ಸಾಗಿಲ್ಲ ಎಂಬ ಕಾರಣ ನೀಡಿ ಸಿಬಿಐ ವಕೀಲರು ಜಾಮೀನಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರೂ ನ್ಯಾಯಾಲಯ ಆತನಿಗೆ ಜಾಮೀನು ನೀಡಿದೆ.