×
Ad

ಐಎಎಸ್ ಹುದ್ದೆ: ಶಿಕ್ಷಣ ಸಚಿವನ ಪುತ್ರಿ, ಉಪಸ್ಪೀಕರ್ ಸಂಬಂಧಿಯ ಹೆಸರು ಶಿಫಾರಸುಗೊಳಿಸಿದ ಖಟ್ಟರ್ ಸರಕಾರ

Update: 2017-11-21 18:31 IST

ಚಂಡೀಗಢ, ನ.21 : ಹರ್ಯಾಣ ರಾಜ್ಯದ ಹೊರಗಿನವರಿಗೆ ಮೀಸಲಾಗಿರುವ ಒಂದು ಐಎಎಸ್ ಅಧಿಕಾರಿಯ ಹುದ್ದೆಗಾಗಿ ರಾಜ್ಯದ ಇಬ್ಬರು ಪ್ರಮುಖ ಬಿಜೆಪಿ ನಾಯಕರುಗಳ ಸಂಬಂಧಿಕರ ಹೆಸರುಗಳನ್ನು ಅಲ್ಲಿನ ಮನೋಹರಲಾಲ್ ಖಟ್ಟರ್ ಸರಕಾರ ಅಂತಿಮಗೊಳಿಸಿದೆ. ಅವರಲ್ಲಿ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮ ಅವರ ಪುತ್ರಿ 42 ವರ್ಷದ ಡಾ ಆಶಾ ಶರ್ಮ ಹಾಗೂ ವಿಧಾನಸಭೆಯ ಉಪಸ್ಪೀಕರ್ ಸಂತೋಷ್ ಯಾದವ್ ಅವರ ಸೋದರ, 56 ವರ್ಷದ ಲಾಜಪತ್ ರೈ ಸೇರಿದ್ದಾರೆ. ಇವರ ಹೆಸರುಗಳು ಈ ಹುದ್ದೆಗಾಗಿ ಅಂತಿಮಗೊಳಿಸಲ್ಪಟ್ಟ ಐದು ಮಂದಿಯ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿವೆ. ಈ ಹೆಸರುಗಳನ್ನು ರಾಜ್ಯ ಸರಕಾರ ಕೇಂದ್ರ ಲೋಕ ಸೇವಾ ಆಯೋಗಕ್ಕೆ ಶಿಫಾರಸು ಮಾಡಿದೆ.

ಎಂಬಿಬಿಎಸ್ ಪದವೀಧರೆಯಾಗಿರುವ ಡಾ ಶರ್ಮಾ ಅವರು ಹರ್ಯಾಣ ರೋಡ್‌ವೇಸ್ ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ. ಈ ಪಟ್ಟಿಯಲ್ಲಿರುವ ಇತರರೆಂದರೆ ದಂತ ಆರೋಗ್ಯ ಸೇವೆಗಳ ನಿರ್ದೇಶಕರಾಗಿರುವ ಪರ್ವೀನ್ ಸೇಠಿ, ಹರ್ಯಾಣ ರಾಜ ಭವನ್ ಆರೋಗ್ಯ ಸೇವೆಗಳ ಉಸ್ತುವಾರಿ ಡಾ ರಾಕೇಶ್ ತಲ್ವಾರ್ ಹಾಗೂ ಜಿಲ್ಲಾ ಯೋಜನಾಧಿಕಾರಿ ವಿಜೇಂದರ್ ಸಿಂಗ್.

ಕಳೆದ ವರ್ಷ ಕೂಡ ಡಾ ಶರ್ಮಾ ಅವರ ಹೆಸರನ್ನು ಮೊದಲಾಗಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದರೂ ನಿಗದಿತ ಅವಧಿಯಾದ ಡಿಸೆಂಬರ್ 31ರೊಳಗೆ ಸೂಕ್ತ ಮಾಹಿತಿ ನೀಡಲಾಗಿಲ್ಲವೆಂಬ ಆಧಾರದಲ್ಲಿ ಲೋಕಸೇವಾ ಆಯೋಗವು ಈ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು.

ಈ ಐಎಎಸ್ ಅಧಿಕಾರಿಯ ಹುದ್ದೆಗೆ ಮುಖ್ಯಮಂತ್ರಿ ಖಟ್ಟರ್ ಅವರು ಮುಖ್ಯ ಕಾರ್ಯದರ್ಶಿ ಡಿ ಎಸ್ ಧೇಸಿ ಅವರ ನೇತೃತ್ವದ ಸಮಿತಿಯನ್ನು ರಚಿಸಿದ್ದರು. ಅಧಿಕಾರಿಗಳ ಕಳೆದ ಐದು ವರ್ಷಗಳ ಕಾರ್ಯನಿರ್ವಹಣೆಯ ಆಧಾರದಲ್ಲಿ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತೆಂದು ಹೇಳಲಾಗಿದೆ. ಆದರೆ ಅತ್ಯುತ್ತಮ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಾರ್ಷಿಕ ಗೌಪ್ಯತಾ ವರದಿಗಳಲ್ಲಿ ಇದ್ದ ಕನಿಷ್ಠ ಮೂವರು ಅಧಿಕಾರಿಗಳ ಹೆಸರುಗಳನ್ನು ಅವಗಣಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಆರೋಪದ ಬಗ್ಗೆ ರಾಜ್ಯ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News