ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ ಸಾಧ್ಯತೆ
ಹೊಸದಿಲ್ಲಿ,ನ.21: ಕೇಂದ್ರವು ತ್ರಿವಳಿ ತಲಾಖ್ ಪದ್ಧತಿ ರದ್ದತಿಗೆ ಶಾಸನವೊಂದನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.
ಶಾಸನವನ್ನು ರೂಪಿಸಲು ಸಚಿವ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ಆದರೆ ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕಗಳನ್ನು ಇನ್ನಷ್ಟೇ ಪ್ರಕಟಿಸ ಬೇಕಾಗಿದೆ. ತನ್ಮಧ್ಯೆ ನರೇಂದ್ರ ಮೋದಿ ನಾಯಕತ್ವದ ಸರಕಾರವು ನಿರುದ್ಯೋಗ ಮತ್ತು ಭ್ರಷ್ಟಾಚಾರದಂತಹ ಪ್ರಮುಖ ವಿಷಯಗಳ ಮೇಲೆ ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸರಕಾರವು ಕ್ಷುಲ್ಲಕ ನೆಪಗಳನ್ನೊಡ್ಡಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಬುಡಮೇಲುಗೊಳಿಸುತ್ತಿದೆ. ಅದು ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ, ಹಾಲಿ ಸಚಿವರ ಹಿತಾಸಕ್ತಿ ಸಂಘರ್ಷ ಮತ್ತು ಶಂಕಾಸ್ಪದ ರಕ್ಷಣಾ ವ್ಯವಹಾರಗಳ ಕುರಿತು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನೋಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸೋಮವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರೋಪಿಸಿದ್ದರು.
ಮಂಗಳವಾರ ರಾಜಕೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿತ್ತಸಚಿವ ಅರುಣ್ ಜೇಟ್ಲಿಯವರು ಸೋನಿಯಾ ಆರೋಪವನ್ನು ತಿರಸ್ಕರಿಸಿದರು. ಚುನಾವಣಾ ದಿನಾಂಕಗಳಿಗೆ ಅನುಗುಣವಾಗಿ ಸಂಸತ್ ಅಧಿವೇಶನಗಳ ವೇಳಾಪಟ್ಟಿಗಳನ್ನು ಮರುರೂಪಿಸುವುದು ಸಾಮಾನ್ಯವಾಗಿದೆ ಮತ್ತು ಸ್ವತಃ ಕಾಂಗ್ರೆಸ್ ಕೂಡ ಹಿಂದೆ ಹಲವಾರು ಬಾರಿ ಅಧಿವೇಶನಗಳನ್ನು ಮುಂದೂಡಿದೆ ಎಂದು ಅವರು ಹೇಳಿದರು.