ಭಟ್ಕಳ: ದರೋಡೆ ಯತ್ನ ಪ್ರಕರಣ; ನಾಲ್ವರು ವಶ
ಭಟ್ಕಳ, ನ. 21: ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಾರಗದ್ದೆ 1ನೇ ಕ್ರಾಸ್ ನಲ್ಲಿ ನಡೆದಿದ್ದು ಘಟನೆಗೆ ಸಂಬಧಿಸಿದಂತೆ ಪೊಲೀಸರು ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಲಾಹುದ್ದೀನ್ ಲೌನಾ ಎಂಬವರ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರು ಮಲಗಿದ್ದ ಸಲಾಹುದ್ದೀನ್ ರ ಕತ್ತಿಗೆ ತಲವಾರು ಇಟ್ಟು ಮನೆಯಲ್ಲಿರುವ ಎಲ್ಲ ಆಭರಣ, ಹಣವನ್ನು ತಂದುಕೊಡು ಎಂದು ಬೆದರಿಕೆ ಒಡ್ಡಿದ್ದು ಹೆದರಿಕೊಂಡ ಸಲಾಹುದ್ದೀನ್ ಮನೆಯಲ್ಲಿ ರೂ. 19,800 ರನ್ನು ತಂದು ಕೊಟ್ಟರು ಎನ್ನಲಾಗಿದೆ. ಆದರೆ ಇದಾವುದಕ್ಕೂ ತೃಪ್ತಿಪಟ್ಟುಕೊಳ್ಳದ ದರೋಡೆಕೋರರು ಮನೆಯನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಯಾವುದೇ ಬೆಲೆಬಾಳುವ ಆಭರಣಗಳಾಗಲಿ ಹೆಚ್ಚಿನ ಹಣವನ್ನಾಗಲಿ ದೊರೆಯದೆ ಇದ್ದಾಗ ದರೋಡೆಕೋರರು ಪರಾರಿಯಾಗಿದ್ದಾರೆ. ನಾಲ್ವರಲ್ಲಿ ಇಬ್ಬರು ಕನ್ನಡ ಹಾಗೂ ಮತ್ತಿಬ್ಬರು ಉರ್ದು ಭಾಷೆ ಮಾತನಾಡುತ್ತಿದ್ದರು ಎಂದು ಸಲಾಹುದ್ದೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶ್ವಾನದಳದಿಂದ ಪರಿಶೀಲನೆ: ದರೋಡೆ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಮಂಗಳವಾರ ಬೆಳಗ್ಗೆ ಕಾರವಾರದಿಂದ ಪೊಲೀಸ್ ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ.