ಮೋದಿಯಿಂದ ದೇಶಕ್ಕೆ ಅಪಾಯ: ವಸಂತ ಆಚಾರಿ
ಮಂಗಳೂರು, ನ.21: ಜಗತ್ತಿನಲ್ಲೆಡೆ ಬಲಪಂಥೀಯ ಶಕ್ತಿಗಳು ವಿಜೃಂಭಿಸುತ್ತಿದ್ದು ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿಡಲು ಹವಣಿಸುತ್ತಿದೆ. ಇದರ ನೇತೃತ್ವವನ್ನು ಅಮೇರಿಕನ್ ಸಾಮ್ರಾಜ್ಯಶಾಹಿಗಳು ವಹಿಸಿದ್ದು, ಜಗತ್ತಿನ ಬಡ ಹಾಗೂ ಹಿಂದುಳಿದ ದೇಶಗಳಿಗೆ ಮೂಗುದಾರ ತೊಡಿಸಲು ಹೊರಟಿದೆ. ಭಾರತವನ್ನು ತನ್ನ ಕಿರಿಯ ಪಾಲುದಾರರನ್ನಾಗಿ ಮಾಡುವ ಮೂಲಕ ಸಮಾಜವಾದಿ ವ್ಯವಸ್ಥೆಯುಳ್ಳ ಚೀನಾ ದೇಶಕ್ಕೆ ಬೆದರಿಕೆ ಒಡ್ಡುತ್ತಿದೆ. ಅಮೇರಿಕಾ ತನ್ನ ಲಾಭಕೋರ ನೀತಿಗಾಗಿ ಭಾರತದ ಜತೆಗೂಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಉದಾರೀಕರಣ ನೀತಿಗಳಿಂದಾಗಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಿಯಂತ್ರಣ ಸಾಧಿಸಿರುವುದರಿಂದ ದೇಶವೇ ಅಪಾಯದಲ್ಲಿದೆ. ಇದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಂಪೂರ್ಣವಾಗಿ ಕುಮ್ಮಕ್ಕು ನೀಡುತ್ತಿವೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ಜಪ್ಪಿನಮೊಗರಿನಲ್ಲಿ ಜರಗಿದ ಸಿಪಿಎಂ 22ನೆ ಮಂಗಳೂರು ನಗರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಪಿಎಂ ದ.ಕ.ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಹಿರಿಯ ಸದಸ್ಯರಾದ ಲೋಕಯ್ಯ ಶೆಟ್ಟಿ, ಮೊಯ್ದಿನಬ್ಬ, ಶ್ರೀಧರ ಸಾಲಿಯಾನ್, ಮೋನಪ್ಪಬಂಗೇರ, ಬಾಬು ಶೆಟ್ಟಿ, ಸರೋಜಮ್ಮ, ಜಾರ್ಜ್ ಗ್ಲೇಡ್‌ಸನ್ ಪೀಟರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಿಪಿಎಂ ರಾಜ್ಯ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ನಗರ ಸಮಿತಿ ಸದಸ್ಯರಾದ ಜಯಂತಿ ಬಿ.ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ದಿನೇಶ್ ಶೆಟ್ಟಿ, ಸುರೇಶ್ ಬಜಾಲ್, ಸಂತೋಷ್ ಬಜಾಲ್, ಪ್ರೇಮನಾಥ ಜಲ್ಲಿಗುಡ್ಡೆ, ಭಾರತಿ ಬೋಳಾರ್, ಸಾದಿಕ್ ಕಣ್ಣೂರು, ಪ್ರದೀಪ್, ಸಂತೋಷ್ ಶಕ್ತಿನಗರ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿದರು. ದಿನೇಶ್ ಅಂಚನ್ ವಂದಿಸಿದರು.