ಕನ್ನಡ, ತುಳು ಭಾಷೆಗಳಿಗೆ ‘ಕ-ನಾದ’ ಕೀಬೋರ್ಡ್ ಅಭಿವೃದ್ಧಿ

Update: 2017-11-21 14:45 GMT

ಉಡುಪಿ, ನ.21: ಕನ್ನಡ ಮತ್ತು ತುಳು ಭಾಷೆಯ ಬಳಕೆ ಮತ್ತು ಬೆಳವಣಿಗೆ ಗಾಗಿ ‘ಕ-ನಾದ’ ಎಂಬ ಧ್ವನಿ ಆಧಾರಿತ ಕೀಲಿಮಣೆ (ಕೀಬೋರ್ಡ್)ಯನ್ನು ಅಭಿವೃದ್ಧಿ ಪಡಿಸಲಾ ಗಿದ್ದು, ಈ ಒಂದೇ ಕೀಲಿಮಣೆಯನ್ನು ದೇಶ ವಿದೇಶಗಳ ಒಟ್ಟು 16 ಬ್ರಾಹ್ಮಿ ಲಿಪಿ ಭಾಷೆಗಳನ್ನು ಟೈಪ್ ಮಾಡಲು ಬಳಸಬಹುದಾಗಿದೆ.

ಮಾತೃಭಾಷೆಯ ರಕ್ಷಣೆಗಾಗಿ ಈ ವಿಶಿಷ್ಟ ರೀತಿಯ ಕೀಲಿಮಣೆಯ ಅಕ್ಷರ ವಿನ್ಯಾಸವನ್ನು ಅಭಿವೃದ್ಧಿ ಪಡಿಸಿದವರು ಮೂಲತಃ ಉಡುಪಿ ನಿಟ್ಟೂರಿನ ನಿವಾಸಿ ಯಾಗಿರುವ ಪ್ರಸ್ತುತ ಅಮೆರಿಕಾದಲ್ಲಿರುವ ಬಾಹ್ಯಾಕಾಶ ಹಾಗೂ ಸಿಮ್ಯು ಲೇಟರ್ ತಜ್ಞ ಡಾ.ಗುರುಪ್ರಸಾದ್ ಮತ್ತು ಭಾಷಾ ಸಂಶೋಧಕ ಪ್ರೊ.ಬಿ.ವಿ.ಕೆ. ಶಾಸ್ತ್ರಿ. ಅದೇ ರೀತಿ ಇವರ ತಂಡದಲ್ಲಿ ಶಿವಮೊಗ್ಗದ ಆದರ್ಶ ಸರಫ್, ಮೈಸೂರಿನ ಪರಮೇಶ್ವರ ಭಟ್, ಬೆಂಗಳೂರಿನ ಗಿರೀಶ್ ಕೂಡ ಇದ್ದಾರೆ. ಇವರು ಅಮೆರಿಕದಲ್ಲಿ ಈ ಅಕ್ಷರ ವಿನ್ಯಾಸಕ್ಕಾಗಿ ಸಂಶೋಧನೆ ನಡೆಸಿ ಯಶಸ್ವಿಯಾಗಿದ್ದಾರೆ.

‘ಈವರೆಗೆ ನಾವು ಈ ಎಲ್ಲ ಭಾಷೆಗಳನ್ನು ಟೈಪ್ ಮಾಡಲು ಆಂಗ್ಲ ಅಕ್ಷರ ಗಳಿರುವ ಕ್ವರ್ಟಿ ಕೀಬೋರ್ಡ್‌ಗಳನ್ನು ಬಳಸುತ್ತಿದ್ದೇವೆ. ಇದು ಟೈಪ್‌ರೈಟಿಂಗ್ ಆಧಾರಿತ ಕೀಬೋರ್ಡ್. ಇಲ್ಲಿ ಭಾಷೆಗೂ ಕೀಬೋರ್ಡ್‌ಗೂ ಸಂಬಂಧವೇ ಇರುವುದಿಲ್ಲ. ಆದರೆ ಕ-ನಾದ ಕೀಬೋರ್ಡ್ ತುಳು, ಕನ್ನಡ ಮತ್ತು ಸಂಸ್ಕೃತ ಸೇರಿದಂತೆ ವಿವಿಧ ಭಾಷೆಗಳ ಲಿಪಿಗೆ ಆಧಾರಿತವಾಗಿ ರಚಿಸಲಾಗಿದೆ. ಇಲ್ಲಿ ಆಯಾ ಭಾಷೆಗಳ ಲಿಪಿಯ ಅಕ್ಷರಗಳನ್ನು ಜೋಡಿಸಿರುವುದರಿಂದ ಆಂಗ್ಲ ಭಾಷೆಯ ಜ್ಞಾನದ ಅಗತ್ಯವೇ ಇರುವುದಿಲ್ಲ’ ಎನ್ನುತ್ತಾರೆ ಕೀಲಿಮಣೆ ಅಭಿವೃದ್ಧಿ ಪಡಿಸಿದ ಸಂಶೋಧಕ ಡಾ.ಗುರುಪ್ರಸಾದ್.

9 ವರ್ಷಗಳ ಪರಿಶ್ರಮ: ಮೈಸೂರು ವಿವಿಯಲ್ಲಿ ಬಿಇ ಮುಗಿಸಿದ ಡಾ. ಗುರುಪ್ರಸಾದ್ ಎರಡು ವರ್ಷಗಳ ಕಾಲ ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ದುಡಿದು ಬಳಿಕ 1989ರಲ್ಲಿ ಅಮೆರಿಕಾಕ್ಕೆ ತೆರಳಿದರು. ಅಲ್ಲಿ ಅಮೆರಿಕಾ ವಿವಿ ಆಫ್ ಸೆಂಟರ್ ಫ್ಲೋರಿಡಾದಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ ಅವರು, ಪ್ರಸ್ತುತ ಅಮೆರಿಕಾದ ಓರ್ಲ್ಯಾಂಡೋದಲ್ಲಿ ಸ್ವಂತ ಸಾಫ್ಟ್‌ವೇ್ ಕಂಪೆನಿಯನ್ನು ನಡೆಸಿಕೊಂಡಿದ್ದಾರೆ.

ಈ ಕೀಲಿಮಣೆ ಸಂಶೋಧನೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ತೊಡ ಗಿಸಿಕೊಂಡಿರುವ ಇವರುಕೀಲಿಮಣೆಯ ಮೊದಲ ಮಾದರಿಯನ್ನು ಚೌಕಾಕಾರ ದಲ್ಲಿ ಸಿದ್ಧಪಡಿಸಿದರು. ಆದರೆ ಜನರು ಆಯಾತಾಕಾರದ ಕ್ವರ್ಟಿ ವಿನ್ಯಾಸಕ್ಕೆ ಹೊಂದಿಕೊಂಡಿರುವುದರಿಂದ ಇದು ಸಫಲವಾಗಲಿಲ್ಲ. ಮುಂದೆ ಅವರು ಕ್ವರ್ಟಿ ಶೈಲಿಯ ಆಯತಾಕಾರದ ಕೀಬೋರ್ಡ್‌ನ್ನೇ ರಚಿಸಿದರು. ಈ ಕೀಬೋರ್ಡ್ ಇವರ ಒಂಭತ್ತು ವರ್ಷಗಳ ಪರಿಶ್ರಮದ ಫಲವಾಗಿದೆ.

ಇವರು ಈ ಕೀಬೋರ್ಡ್‌ನ್ನು ಹಿಂದಿ, ಮಲೆಯಾಳಂ, ತೆಲುಗು, ಬಂಗಾಳಿ, ಗುಜರಾತಿ, ಸಿಂಹಳಿ, ನೇಪಾಲಿ, ಒಡಿಯಾ, ಬರ್ಮಿಸ್, ಮಲೈ ಭಾಷೆ ಸೇರಿದಂತೆ ಒಟ್ಟು 16 ಬ್ರಾಹ್ಮಿ ಲಿಪಿ ಭಾಷೆಗಳಿಗೆ ಈ ಒಂದೇ ಕೀಲಿಮಣೆ ಸಾಕಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಹಾರ್ಡ್‌ವೇರ್ ಮತ್ತು ಸಾಪ್ಟ್‌ವೇರ್‌ನ್ನು ಡಾ.ಗುರುಪ್ರಸಾದ್ ಅಭಿವೃದ್ದಿ ಪಡಿಸಿದರೆ, ಭಾಷೆಯ ಬಳಕೆಯಲ್ಲಿ ಬಿ.ವಿ.ಕೆ. ಶಾಸ್ತ್ರಿ ಶ್ರಮವಹಿಸಿದ್ದಾರೆ. ಇದೀಗ ಗುರುಪ್ರಸಾದ್ ಕಳೆದ ಏಳು ತಿಂಗಳಿನಿಂದ ಭಾರತದಲ್ಲಿದ್ದು ಬೆಂಗಳೂರಿನಲ್ಲಿ ಕೀಲಿಮಣೆ ತಯಾರಿಸುವ ಕ-ನಾದ ಫೊನೆ ಟಿಕ್ಸ್ ಸ್ಥಾಪನೆ ಮಾಡಿದ್ದಾರೆ.

ತುಳು ಲಿಪಿ ಪರಿಚಯ: ಈಗಿನ ಕೀಬೋರ್ಡ್‌ನಲ್ಲಿ 26 ಇಂಗ್ಲಿಷ್ ಅಕ್ಷರ ಗಳು ಮಾತ್ರ ಇರುವುದರಿಂದ ಕನ್ನಡದ ಬೇರೆ ಅಕ್ಷರಗಳನ್ನು ಟೈಪ್ ಮಾಡಲು ಶಿಫ್ಟ್ ಬಳಕೆ ಮಾಡಬೇಕಾಗುತ್ತದೆ. ಆದರೆ ಕ-ನಾದ ಕೀಬೋರ್ಡ್‌ನಲ್ಲಿ ಕನ್ನಡ, ತುಳು, ಸಂಸ್ಕೃತ ಭಾಷೆಗಳ ಎಲ್ಲ ಅಕ್ಷರಗಳ ಕೀಗಳು ಸಿಗುತ್ತವೆ. ಇದರ ಅಕ್ಷರ ವಿನ್ಯಾಸವನ್ನು ತುಳು, ಸಂಸ್ಕೃತ, ಕನ್ನಡ ಭಾಷಾ ಶೈಲಿಗೆ ಅನುಗುಣವಾಗಿ ರಚಿಸ ಲಾಗಿದ್ದು, ಇದರಿಂದ ಈ ಎಲ್ಲ ಭಾಷೆಗಳ ಕಲಿಕೆ ಸರಳವಾುತ್ತದೆ.

ತುಳು ಯುನಿಕೋಡ್‌ಗೆ ವೈಷ್ಣವ ಮೂರ್ತಿ ಹಾಗೂ ಕೆ.ಪಿ.ರಾವ್ ಸಲ್ಲಿಸಿದ ಪ್ರಸ್ತಾವನೆಯಲ್ಲಿ ನಮೂದಿಸಲಾದ ಎ ಮತ್ತು ಓ ಅಕ್ಷರವನ್ನು ಕೂಡ ಈ ಕೀಬೋರ್ಡ್‌ನಲ್ಲಿ ಅಳವಡಿಸಲಾಗಿದೆ. ಮೊದಲು ತುಳು ಲಿಪಿಯಲ್ಲಿ ಈ ಎರಡು ಅಕ್ಷರಗಳಿರಲಿಲ್ಲ. ತುಳು ಕೀಲಿಮಣೆಯಲ್ಲಿ ಒಟ್ಟು 49 ಕೀಲಿಗಳಿವೆ. ಇದಕ್ಕೆ ಎರಡು ಹಳೆ ಕನ್ನಡ ಅಕ್ಷವನ್ನು ಕೂಡ ಸೇರಿಸಿಕೊಳ್ಳಲಾಗಿದೆ.

ತುಳು ಲಿಪಿ ಪರಿಚಯ ಇಲ್ಲದವರು ಕನ್ನಡದ ಕೀಲಿಮಣೆಯಲ್ಲಿ ಕನ್ನಡ ಅಕ್ಷರದ ಮೂಲಕ ತುಳು ಭಾಷೆಯಲ್ಲಿ ಟೈಪ್ ಮಾಡಬಹುದು. ಮುಂದೆ ಈ ಮೂಲಕ ತುಳು ಲಿಪಿ ಪರಿಚಯವಾದ ಬಳಿಕ ತುಳು ಅಕ್ಷರಗಳ ಕೀಲಿಮಣೆ ಯನ್ನು ಬಳಸಿಕೊಳ್ಳಬಹುದು. ಈ ರೀತಿಯಾಗಿ ಕ ನಾದ ಕೀಲಿಮಣೆ ತುಳು ಲಿಪಿ ಹಾಗೂ ಭಾಷೆಯ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಿದೆ.

‘ತುಳು ನಮ್ಮ ಮಾತೃ ಭಾಷೆ. ಎಂಟು ವರ್ಷಗಳ ಹಿಂದೆ ಅಮೆರಿಕಾದಲ್ಲಿ ಒಂದು ಕಾರ್ಯಕ್ರಮದಲ್ಲಿ ವಿದ್ಯಾಭೂಷಣ್ ತುಳುವಿನ ಸಹಿ ಮಾಡಿದಾಗ ನನಗೆ ತುಳು ಲಿಪಿ ಇರುವುದು ಗೊತ್ತಾಯಿತು. ಅದರ ನಂತರ ತುಳು ಕೀಲಿ ಮಣೆ ತಯಾರಿಸುವ ಆಲೋಚನೆ ಮಾಡಿದೆ. ಒಂದು ತಿಂಗಳ ಹಿಂದೆ ತುಳು ಕ-ನಾದ ಕೀಲಿಮಣೆ ಅಭಿವೃದ್ಧಿ ಪಡಿಸಿದ್ದೇವೆ. ಶಾಲಾ ಮಕ್ಕಳಿಗೆ ತುಳು ಭಾಷೆ ಯನ್ನು ಅತ್ಯಂತ ಸುಲಭದಲ್ಲಿ ಕಲಿಯಬಹುದಾಗಿದೆ. ಇದನ್ನು ಕಂಪ್ಯೂಟರ್‌ಗೆ ಮಾತ್ರವಲ್ಲದೆ ಮೊಬೈಲ್‌ಗೂ ಬಳಸಬಹುದಾಗಿದೆ ಎಂದು ಡಾ. ಗುರುಪ್ರಸಾದ್ ತಿಳಿಸಿದರು.

ಕೀ ಪ್ರೆಸ್ ಕೀಬೋರ್ಡ್ ಅಚ್ಚಿಗೆ 25 ಲಕ್ಷ ರೂ.
ಈ ಕೀಲಿಮಣೆ ತಯಾರಿಕೆಗೆ ಏಳರಿಂದ ಎಂಟು ಲಕ್ಷ ರೂ.ವರೆಗೆ ಖರ್ಚಾಗಿದೆ. ಒಂದು ಕೀಬೋರ್ಡ್‌ಗೆ 1800ರೂ.ನಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ನೀಡಲು ಉದ್ದೇಶಿ ಸಲಾಗಿದೆ. ಮುಂದೆ ಕ ನಾದ ಕೀ ಪ್ರೆಸ್ ಕೀಬೋರ್ಡ್ ಅಚ್ಚು ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ 25ಲಕ್ಷ ರೂ. ವೆಚ್ಚವಾಗಲಿದೆ ಎಂದು ಡಾ.ಗುರು ಪ್ರಸಾದ್ ತಿಳಿಸಿದರು.

ನಮ್ಮ ತುಳು ಭಾಷೆಯಲ್ಲಿ ಶಕ್ತಿ ಇದೆ. ಅದನ್ನು ನಮ್ಮ ಮಕ್ಕಳಿಗೆ ತೋರಿಸಬೇಕು. ಈ ಬಗ್ಗೆ ಬೇಕಾದರೆ ನಾವು ತರಬೇತಿಯನ್ನು ಕೂಡ ನೀಡುತ್ತೇವೆ. ಈ ಕನ್ನಡ ಕೀಲಿಮಣೆಯ ಬಳಕೆಯನ್ನು ನಾಲ್ಕು ಗಂಟೆಯ ತರಬೇತಿಯಲ್ಲಿ ಕಲಿಯ ಬಹುದು. ಕನ್ನಡ ವರ್ಣಮಾಲೆಯ ಪರಿಚಯ ಇರುವ ಪ್ರತಿಯೊಬ್ಬರು ಕೂಡ ಈ ಕೀಲಿಮಣೆಯನ್ನು ಬಳಕೆ ಮಾಡಬಹುದು. ಇದರಲ್ಲಿಯೇ ತುಳುವನ್ನು ಕೂಡ ಅಭ್ಯಸಿಸಬಹುದು ಎಂದು ಅವರು ಹೇಳಿದರು.


ಕ-ನಾದ ಕೀಲಿಮಣೆಯ ವೈಶಿಷ್ಟತೆಗಳು!
ಭಾರತೀಯ ಭಾಷಾನುಗುಣ, ಬಹು ಭಾಷಿಕ, ಬ್ರಾಹ್ಮೀ- ವರ್ಣ- ಅಕ್ಷರ ವ್ಯವಸ್ಥೆಯ ಕೀಲಿಮಣೆ ಇದಾಗಿದೆ. ಭಾರತೀಯ ಭಾಷೆಗಳ ಜೊತೆಗೆ ಆಂಗ್ಲ -ವರ್ಣಾಕ್ಷರಗಳ ಸಂಯೋಜನೆಗೆ ಅವಕಾಶ ನೀಡಲಾಗಿದೆ. ಯುಎಸ್‌ಬಿ ಜೋಡಣೆ, ಯುನಿಕೋಡ್ ಸಂಕೀತ ಶಿಷ್ಟತೆ ಇದೆ. ಕೀಲಿಮಣೆಯ ವರ್ಣಾಕ್ಷರ ವಿನ್ಯಾಸವು ಬ್ರಾಹ್ಮೀ ಭಾಷೆಗೆ ಅನುಗುಣವಾದ ಸ್ವರ- ವ್ಯಂಜನ ವಿಭಾಗವನ್ನು ಅನುಸರಿಸಿ ಮಾಡಲಾಗಿದೆ. ಸರಳ, ಸಹಜ ಭಾಷಾ ಕಲಿಕಾ ಸಾಧನವಾಗಿದೆ. ಶಾಲೆಯಲ್ಲಿ ಭಾಷಾ ಬೋಧಕರಿಗೆ, ಗೃಹ ಶಿಕ್ಷಣಕ್ಕೆ ಭಾರತೀಯ ಭಾಷೆಗಳ ಪ್ರಥಮ ಕಲಿಕೆಗೆ ಸುಲಭವಾದ ಕೀಲಿಮಣೆ ಇದು. ವಿಂಡೋಸ್, ಲೀನಕ್ಸ್ ಆಂಡ್ರಾಯ್ಡಾನಲ್ಲೂ ಬಳಕೆ ಮಾಡಬಹುದು.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News